ಮಂಗಳೂರಿನಲ್ಲಿ ಡ್ರಗ್ ನೀಡಿ ಯುವತಿಗೆ ಲೈಂಗಿಕ ಕಿರುಕುಳ: ಮಗಳನ್ನು ಪಾರು ಮಾಡುವಂತೆ ವಿಎಚ್ ಪಿ ಮೊರೆ ಹೋದ ತಾಯಿ
Monday, December 27, 2021
ಮಂಗಳೂರು: ಯುವತಿಯೋರ್ವಳಿಗೆ ಡ್ರಗ್ಸ್ ನೀಡಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಪೊಲೀಸರು ವ್ಯಕ್ತಿಯೋರ್ವನನ್ನು ಅರೆಸ್ಟ್ ಮಾಡಿದ್ದಾರೆ. ಯುವತಿಯ ತಾಯಿ ಮಗಳನ್ನು ಡ್ರಗ್ಸ್ ಹಾಗೂ ಸೆಕ್ಸ್ ದಂಧೆಯಿಂದ ಪಾರು ಮಾಡಿ ಎಂದು ವಿಎಚ್ ಪಿ ಮೊರೆ ಹೋಗಿದ್ದಾರೆ.
ಮಂಗಳೂರಿನ ಚೊಕ್ಕಬೆಟ್ಟು, ಕಾಟಿಪಳ್ಳ ನಿವಾಸಿ ಮಹಮ್ಮದ್ ಶರೀಫ್ ಸಿದ್ದೀಕ್(49) ಬಂಧಿತ ಆರೋಪಿ.
ಬಿಜೈ ನಿವಾಸಿಯಾದ ಯುವತಿಯು ತಾಯಿ ಗ್ರೇಸಿ ಪಿಂಟೊ ಅವರೊಂದಿಗೆ ವಾಸಿಸುತ್ತಿದ್ದರು. ಯುವತಿಗೆ ಕಾಲೇಜಿನಲ್ಲಿರುವಾಗಲೇ ಆರೋಪಿ ಫೇಸ್ ಬುಕ್ ಮುಖಾಂತರ ಪರಿಚಯವಾಗಿದ್ದಾನೆ. ಕಳೆದ ನಾಲ್ಕು ವರ್ಷಗಳಿಂದ ಆರೋಪಿಯೊಂದಿಗೆ ಯುವತಿ ಸಂಪರ್ಕದಲ್ಲಿದ್ದಾಳೆ. ಈತ ಯುವತಿಗೆ ಮೊದಲು ಡ್ರಗ್ಸ್ ಚಟ ಹತ್ತಿಸಿದ್ದು, ಬಳಿಕ ಆಕೆಯನ್ನು ನಿರಂತರವಾಗಿ ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದಾನೆ ಎಂದು ಆಕೆಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಆಕೆಗೆ ಎಷ್ಟೇ ಬುದ್ಧಿವಾದ ಹೇಳಿದರೂ ಆರೋಪಿಯ ಬಲೆಯಿಂದ ಪಾರು ಮಾಡಲು ಸಾಧ್ಯವಾಗಿರಲಿಲ್ಲ. ಇದೇ ಚಿಂತೆಯಲ್ಲಿ ಆಕೆಯ ತಂದೆಯೂ ಮೃತಹೊಂದಿದ್ದರು. ಅಲ್ಲದೆ ತಾಯಿ ಗ್ರೇಸಿ ಪಿಂಟೋ ಕೂಡಾ ಮಗಳ ಸ್ಥಿತಿಯನ್ನು ಕಂಡು ಅನಾರೋಗ್ಯಕ್ಕೀಡಾಗಿದ್ದಾರೆ. ಆರೋಪಿಯು ಯುವತಿಯನ್ನು ಸಾಕಷ್ಟು ಬಾರಿ ಕರೆದೊಯ್ದಿದ್ದು, ಈ ಸಂದರ್ಭ ಆಕೆ ಎರಡು ಮೂರು ತಿಂಗಳುಗಳ ಕಾಲ ಮನೆಗೆ ಬರುತ್ತಲೇ ಇರಲಿಲ್ಲ ಎಂದು ಪೊಲೀಸರ ಮುಂದೆ ತಾಯಿ ಅಳಲು ತೋಡಿಕೊಂಡಿದ್ದಾರೆ.
ಆರೋಪಿಯ ಮೇಲೆ ಈಗಾಗಲೇ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಡ್ರಗ್ಸ್ ಸಾಗಾಟ ಹಾಗೂ ಮಾದಕದ್ರವ್ಯ ಸೇವನೆ ದೂರು ದಾಖಲಾಗಿದೆ. ಈತ ಈಗಾಗಲೇ ಮೂರು ಮದುವೆಯಾಗಿದ್ದು, ಓರ್ವಳು ಗೋವಾ, ಮತ್ತೋರ್ವಳು ಮುಂಬೈ ಹಾಗೂ ಇನ್ನೊಬ್ಬಳು ಸುರತ್ಕಲ್ ನಲ್ಲಿ ಇದ್ದಾಳೆ. ಇದೀಗ ಆರೋಪಿ ಈ ಯುವತಿಯನ್ನು ದುರ್ಬಳಕೆ ಮಾಡುತ್ತಿದ್ದು, ಯುವತಿಯನ್ನು ಬಿಡುವಂತೆ ಆತನಲ್ಲಿಯೇ ಹೇಳಿದರೆ, ಆರೋಪಿ ಯುವತಿಯ ತಾಯಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದ ಎನ್ನಲಾಗಿದೆ.
ಡಿಸೆಂಬರ್ 22ರಂದು 5.45ರ ಸುಮಾರಿಗೆ ಮನೆಯಲ್ಲಿದ್ದ ಯುವತಿಯನ್ನು ಫೋನ್ ಕರೆ ಮಾಡಿ ನಗರದ ಲಾಲ್ಬಾಗ್ನಲ್ಲಿರುವ ಬಿಗ್ ಬಜಾರ್ನ ಮುಂಭಾಗಕ್ಕೆ ಕರೆದಿದ್ದಾನೆ. ಅಲ್ಲಿಂದ ಆತ ಬೇರೆಡೆಗೆ ಆಕೆಯನ್ನು ಕರೆದೊಯ್ದು ರಾತ್ರಿ ಪೂರ್ತಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ಯುವತಿಯ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಇದೀಗ ಯುವತಿಯ ಮನ ಪರಿವರ್ತನೆಗೆ ಮಂಗಳೂರಿನ ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್ ಗೆ ದಾಖಲಾಗಿಸಲಾಗಿದೆ.