!['SEX' ನಂಬರ್ ಪ್ಲೇಟ್ ನಿಂದ ಮುಜುಗರಕ್ಕೆ ಒಳಗಾದ ವಿದ್ಯಾರ್ಥಿನಿ ಪರವಾಗಿ ನಿಂತ ದೆಹಲಿ ಮಹಿಳಾ ಆಯೋಗ: ಸಾರಿಗೆ ಇಲಾಖೆಗೆ ನೋಟಿಸ್ ಜಾರಿ 'SEX' ನಂಬರ್ ಪ್ಲೇಟ್ ನಿಂದ ಮುಜುಗರಕ್ಕೆ ಒಳಗಾದ ವಿದ್ಯಾರ್ಥಿನಿ ಪರವಾಗಿ ನಿಂತ ದೆಹಲಿ ಮಹಿಳಾ ಆಯೋಗ: ಸಾರಿಗೆ ಇಲಾಖೆಗೆ ನೋಟಿಸ್ ಜಾರಿ](https://blogger.googleusercontent.com/img/b/R29vZ2xl/AVvXsEhPQYmTjDIJ2ODdLu6RYU_jn_a0EcVpqWp_IGYHE08dp4pSv_wZ81gDz8ddkkZFoD9Y7aE-fR8nC9ZEeCxKOAfcCLyUDfnrQ5Y8xVBAVN3fssOaRy6Fg_1wNuDPjDjrIWBcYFOJf_kG33lm/s1600/1638633218478800-0.png)
'SEX' ನಂಬರ್ ಪ್ಲೇಟ್ ನಿಂದ ಮುಜುಗರಕ್ಕೆ ಒಳಗಾದ ವಿದ್ಯಾರ್ಥಿನಿ ಪರವಾಗಿ ನಿಂತ ದೆಹಲಿ ಮಹಿಳಾ ಆಯೋಗ: ಸಾರಿಗೆ ಇಲಾಖೆಗೆ ನೋಟಿಸ್ ಜಾರಿ
Saturday, December 4, 2021
ನವದೆಹಲಿ: ಸ್ಕೂಟಿಗೆ ದೊರೆತ 'SEX ನಂಬರ್ ಪ್ಲೇಟ್ ನಿಂದ ಮುಜುಗರಕ್ಕೆ ಒಳಗಾದ ವಿದ್ಯಾರ್ಥಿನಿ ಪರವಾಗಿ ನಿಂತಿರುವ ದೆಹಲಿ ಮಹಿಳಾ ಆಯೋಗವು ದೆಹಲಿಯ ಸಾರಿಗೆ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ. ತಕ್ಷಣ ನಂಬರ್ ಪ್ಲೇಟ್ ಅನ್ನು ಬದಲಾಯಿಸಿಕೊಡಬೇಕೆಂದು ಕೋರಿದೆ.
ಹೊಸ ಸರಣಿಯಡಿ ನೋಂದಣಿಯಾಗಿರುವ ಒಟ್ಟು ವಾಹನಗಳ ಸಂಖ್ಯೆಯನ್ನು ತನ್ನ ಉತ್ತರದಲ್ಲಿ ನಮೂದಿಸುವಂತೆ ಮಹಿಳಾ ಆಯೋಗ ಸಾರಿಗೆ ಇಲಾಖೆಯನ್ನು ಕೇಳಿಕೊಂಡಿದೆ. ವಿದ್ಯಾರ್ಥಿನಿ ಮುಜುಗರಕ್ಕೆ ಒಳಗಾಗಿ ವಿಚಾರ ಬೆಳಕಿಗೆ ಬಂದ ಬಳಿಕ ಇಡೀ ‘SEX’ ಸರಣಿ ನಂಬರ್ ನೀಡುವುದನ್ನು ನಿಲ್ಲಿಸಲಾಗಿದೆ ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
“ಜನತೆ ಕ್ಷುಲ್ಲಕ ವಿಚಾರಗಳಿಗೆ ತಮಾಷೆ ಮಾಡಿರುವುದು ಬಹಳ ದುರದೃಷ್ಟಕರ ಸಂಗತಿ. ಇದರಿಂದ ಯುವತಿ ಬಹಳ ಕಿರುಕುಳವನ್ನು ಎದುರಿಸಬೇಕಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು ನಾನು ಸಾರಿಗೆ ಇಲಾಖೆಗೆ ನಾಲ್ಕು ದಿನಗಳ ಕಾಲಾವಕಾಶವನ್ನು ನೀಡಿದ್ದೇನೆ. ಆದ್ದರಿಂದ ಯುವತಿಯ ಇನ್ನು ಮುಂದೆ ತೊಂದರೆಗೊಳಗಾಗಬಾರದು. ಅಲ್ಲದೆ ಎಸ್ ಇ ಎಕ್ಸ್ ಪದವನ್ನು ಹೊಂದಿರುವ ಸರಣಿಯಲ್ಲಿ ನೋಂದಾಯಿಸಲಾದ ಒಟ್ಟು ವಾಹನಗಳ ಸಂಖ್ಯೆಯನ್ನು ಸಲ್ಲಿಸಲು ನಾನು ಸಾರಿಗೆ ಇಲಾಖೆಯನ್ನು ಕೇಳಿದ್ದೇನೆ” ಎಂದು ಎಂದು ಮಹಿಳಾ ಆಯೋಗ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಹೇಳಿಕೆ ನೀಡಿದ್ದಾರೆ.
ದೆಹಲಿಯಲ್ಲಿ ದ್ವಿಚಕ್ರ ವಾಹನಗಳನ್ನು ‘ಎಸ್’ ಅಕ್ಷರದಿಂದ ಸೂಚಿಸಲಾಗುತ್ತದೆ. ಪ್ರಸ್ತುತ, ದ್ವಿಚಕ್ರ ವಾಹನಗಳ ನೋಂದಣಿಗಾಗಿ ಚಲಾವಣೆಯಲ್ಲಿರುವ ಎರಡು ಅಕ್ಷರಗಳು ‘ಇ’ ಮತ್ತು ‘ಎಕ್ಸ್’. ಹಾಗಾಗಿ, ದ್ವಿಚಕ್ರ ವಾಹನಗಳ ನಂಬರ್ ಪ್ಲೇಟ್‌ಗಳು ‘ಎಸ್’ ಅಕ್ಷರದ ನಂತರ ‘ಇಎಕ್ಸ್’ ಅಕ್ಷರವನ್ನು ಹೊಂದಬೇಕಾಗಿದೆ. ಈ ಸರಣಿಯಲ್ಲಿ ನೋಂದಣಿ ಸಂಖ್ಯೆ ಪಡೆದವರು ಅದನ್ನು ಬದಲಾಯಿಸಿಕೊಳ್ಳಬಹುದಾಗಿದೆ. ವಿನಂತಿಸಿದರೆ ನಾವು ಅವುಗಳನ್ನು ಕೇಸ್-ಟು-ಕೇಸ್ ಆಧಾರದ ಮೇಲೆ ಬದಲಾಯಿಸಬಹುದು ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.