ತಲಪಾಡಿ: ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಆಗಂತುಕನಿಂದ ಸ್ಕೂಟರ್ ನಲ್ಲಿ ಬಂದು ಲೈಂಗಿಕ ಕಿರುಕುಳಕ್ಕೆ ಯತ್ನ
Wednesday, December 1, 2021
ಉಳ್ಳಾಲ: ಶಾಲೆಗೆ ಹೋಗುತ್ತಿದ್ದ ಅಪ್ರಾಪ್ತೆಯ ಅಪರಿಚಿತನೋರ್ವ ಲೈಂಗಿಕ ಕಿರುಕುಳ ನೀಡಲು ಯತ್ನಿಸಿರುವ ಘಟನೆ ತಲಪಾಡಿ ಅಲಂಕಾರುಗುಡ್ಡೆ ಬಳಿ ಇಂದು ಬೆಳಗ್ಗೆ ನಡೆದಿದೆ.
ಕೋಟೆಕಾರು ಬಳಿಯ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿ ತಲಪಾಡಿ ಚೆಕ್ ಪೋಸ್ಟ್ ಬಳಿ ಬಸ್ ಗೆಂದು ಒಳದಾರಿಯಾಗಿ ನಡೆಕೊಂಡು ಬರುತ್ತಿದ್ದಳು. ಈ ಸಂದರ್ಭ ಸ್ಕೂಟರಿನಲ್ಲಿ ಬಂದ ಆಗಂತುಕನೊರ್ವ ಲೈಂಗಿಕ ಕಿರುಕುಳ ನೀಡಿದ್ದಾನೆ.
ಇದರಿಂದ ಗಾಬರಿಗೊಂಡು ವಿದ್ಯಾರ್ಥಿನಿ ಬೊಬ್ಬೆ ಇಟ್ಟಿದ್ದಾಳೆ. ತಕ್ಷಣ ಸ್ಥಳೀಯರು ಜಮಾಯಿಸಿದ್ದಾರೆ. ಅಷ್ಟರಲ್ಲಾಗಲೇ ಆರೋಪಿ ಪರಾರಿಯಾಗಿದ್ದಾನೆ. ಸ್ಥಳೀಯರು ವಿದ್ಯಾರ್ಥಿನಿಗೆ ಧೈರ್ಯ ತುಂಬಿದ್ದು, ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ತೆರಳಿ ಆರೋಪಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಈ ಬಗ್ಗೆ ಸಿಸಿಟಿವಿಯಲ್ಲಿ ದಾಖಲೆಯಿದ್ದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಸ್ಥಳೀಯವಾಗಿ ಹಲವು ಕಾರ್ಖಾನೆಗಳಿಗೆ ವಲಸೆ ಕಾರ್ಮಿಕರು ಬಂದಿದ್ದಾರೆ. ಆದರೆ ಅವರ ದಾಖಲೆಗಳನ್ನು ಅವರಿಗೆ ಬಾಡಿಗೆ ಮನೆ ಒದಗಿಸಿರುವ ಮನೆ ಮಾಲಕರು ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವುದಿಲ್ಲ. ಅಲ್ಲದೆ ಈ ಭಾಗದಲ್ಲಿ ಇಂತಹ ಕೃತ್ಯಗಳು ಅನೇಕ ನಡೆಯುತ್ತಿದ್ದು, ಈ ಬಗ್ಗೆ ಗ್ರಾಮಸ್ಥರು ಗ್ರಾಮ ಪಂಚಾಯತ್ ಗಮನಕ್ಕೆ ತಂದಿದ್ದರು. ಆದರೆ ಈವರೆಗೆ ಯಾವುದೇ ಕ್ರಮ ವಹಿಸಿಲ್ಲ ಅನ್ನುವ ಆರೋಪ ಕೇಳಿಬಂದಿದೆ.