ಮಹಿಳಾ ಗ್ರಾಹಕಿಗೆ ಲೈಂಗಿಕ ಕಿರುಕುಳ ಆರೋಪ: ಪಾದರಕ್ಷೆ ಅಂಗಡಿ ಮಾಲಕ ಬಂಧನ
Sunday, December 12, 2021
ಮಂಗಳೂರು: ಪಾದರಕ್ಷೆ ಅಂಗಡಿಗೆ ಬಂದಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಅಂಗಡಿ ಮಾಲಕನನ್ನು ಪೊಲೀಸರು ಬಂಧಿಸಿದ ಘಟನೆ ಮುಲ್ಕಿ ಠಾಣಾ ವ್ಯಾಪ್ತಿಯ ತಾಳಿಪಾಡಿ ಗ್ರಾಮದ ಕಿನ್ನಿಗೋಳಿಯಲ್ಲಿ ನಡೆದಿದೆ.
ಪಾದರಕ್ಷೆ ಅಂಗಡಿ ಮಾಲಕ ಸಂಶುದ್ದೀನ್(42) ಬಂಧಿತ ಆರೋಪಿ.
ಕಿನ್ನಿಗೋಳಿಯಲ್ಲಿರುವ ಪಾದರಕ್ಷೆ ಮಳಿಗೆಗೆ ಮಹಿಳೆಯೋರ್ವರು ಬಂದಿದ್ದರು. ಆಗ ಅಂಗಡಿ ಮಾಲಕ ಮಹಿಳಾ ಗ್ರಾಹಕಿಗೆ ವಿವಿಧ ಚಪ್ಪಲಿಗಳನ್ನು ತೋರಿಸಿದ್ದಾನೆ. ಆದರೆ ಅವರಿಗೆ ತೋರಿಸಿರುವ ಯಾವುದೇ ಪಾದರಕ್ಷೆ ಇಷ್ಟವಾಗದೇ ಇದ್ದಾಗ ಅಂಗಡಿ ಮಾಲಕರು ಬೇರೆ ಚಪ್ಪಲಿಗಳನ್ನು ತೋರಿಸುವುದಾಗಿ ತಿಳಿಸಿ ಮಹಿಳಾ ಗ್ರಾಹಕಿಯನ್ನು ಅಂಗಡಿಯ ಒಳಗಿದ್ದ ಇನ್ನೊಂದು ಕಂಪಾರ್ಟ್ ಮೆಂಟ್ ಗೆ ಕರೆದುಕೊಂಡು ಹೋಗಿದ್ದಾನೆ.
ಅಲ್ಲಿ ಆಕೆಯ ಭುಜ ಹಾಗೂ ಎದೆಯ ಭಾಗಕ್ಕೆ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ಮುಲ್ಕಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಆಕೆ ನೀಡಿರುವ ದೂರಿನಂತೆ ಅಂಗಡಿ ಮಾಲಕ ಸಂಶುದ್ದೀನ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.