"ತಾಯಿಯ ಗರ್ಭ ಸಮಾಧಿಯಷ್ಟೇ ಹೆಣ್ಣಿಗೆ ಸುರಕ್ಷಿತ" ಎಂದು ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ!
Monday, December 20, 2021
ಚೆನ್ನೈ: ‘ಸಾಯುವುದೊಂದು ಬಿಟ್ಟು ಬೇರೇನೂ ನನಗೆ ತೋಚುತ್ತಿಲ್ಲ. ಹೆಣ್ಣು ಎಲ್ಲಿಯೂ ಸುರಕ್ಷಿತವಾಗಿಲ್ಲ. ತಾಯಿಯ ಗರ್ಭ ಹಾಗೂ ಸಮಾಧಿಯಷ್ಟೇ ಅವಳಿಗೆ ಸುರಕ್ಷಿತವಾಗಿರುವ ಸ್ಥಳ. ವಿದ್ಯೆ ಕಲಿಸುವ ಶಾಲೆಯಲ್ಲಿಯೂ ಹೆಣ್ಣು ಸುರಕ್ಷಿತವಾಗಿಲ್ಲ. ಶಾಲೆಯನ್ನೂ ನಂಬಬೇಡಿ, ಶಿಕ್ಷಕರನ್ನೂ ನಂಬಬೇಡಿ… ನನಗಾದ ಅನ್ಯಾಯ ಇನ್ನಾವ ಹೆಣ್ಣು ಮಕ್ಕಳಿಗೂ ಆಗದಿರಲಿ, ನನಗೆ ನ್ಯಾಯ ಕೊಡಿಸಿ, ಸಾಯುವುದು ಬಿಟ್ಟರೆ ಬೇರೇನೂ ನನಗೆ ಉಳಿದಿಲ್ಲ..’ ಎಂದು ಚೆನ್ನೈನ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಕಲಿಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದಿಟ್ಟ ಪತ್ರವಿದು.
ಪ್ರಾಧ್ಯಾಪಕನೋರ್ವನು ನೀಡುತ್ತಿದ್ದ ಲೈಂಗಿಕ ಕಿರುಕುಳ, ಹಿಂಸೆಯನ್ನು ತಾಳಲಾರದೆ ಆತ್ಮಹತ್ಯೆಗೆ ಶರಣಾಗಿರುವ ಬಾಲಕಿಯ ಕೊನೆಯ ಮನದಾಳದ ನೋವಿನ ಮಾತಿದು. ‘ಇಂಥಹ ಲೈಂಗಿಕ ಕಿರುಕುಳ ಇನ್ನಾದರೂ ನಿಲ್ಲಲಿ. ಶಾಲೆ ಸೇರಿದಂತೆ ಯಾವುದೂ ಹೆಣ್ಣಿಗೆ ಸುರಕ್ಷಿತವಾಗಿಲ್ಲ, ಈ ಸಮಾಜವನ್ನೂ ನಂಬಬೇಡಿ…’ ಎಂದು ಬರೆದಿರುವ ಬಾಲಕಿ, ತನ್ನ ಸಾವಿಗೆ ಕಾರಣಾರೆಂದು ಸರಿಯಾಗಿ ಉಲ್ಲೇಖಿಸಿಲ್ಲ. ಆದರೆ ಆಕೆಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಆಗಿರುವುದು ಮಾತ್ರ ಪತ್ರದಿಂದ ತಿಳಿದುಬಂದಿದೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿ ಲೋಕದ ಯಾತ್ರೆ ಮುಗಿಸಿದ್ದಾಳೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಕಾಲೇಜಿನ ಪ್ರಾಧ್ಯಾಪಕನೋರ್ವನ ವಿರುದ್ಧ ವಿದ್ಯಾರ್ಥಿನಿಯರು ಬೊಟ್ಟು ಮಾಡಿದ್ದಾರೆ. ಆತನೇ ಇದಕ್ಕೆಲ್ಲಾ ಕಾರಣ ಎಂದಿದ್ದಾರೆ. ವಿದ್ಯಾರ್ಥಿನಿಯರ ಜೊತೆಯಲ್ಲಿ ಈ ಪ್ರಾಧ್ಯಾಪಕ ಅಸಭ್ಯವಾಗಿ ವರ್ತಿಸುತ್ತಿದ್ದ. ಆಕೆಯೊಂದಿಗೆ ಕೂಡ ತನ್ನ ಕಾಮುಕತನ ಪ್ರದರ್ಶಿಸಿರುವುದಾಗಿ ಅವರು ದೂರಿದ್ದಾರೆ.
ಬಾಲಕಿ ಮೃತಪಡುತ್ತಿದ್ದಂತೆಯೇ, ಕಾಲೇಜಿನ ವಿದ್ಯಾರ್ಥಿನಿಯರು ಈ ಕಾಮುಕ ಪ್ರಾಧ್ಯಾಪಕ ಮಡಂಬಾಕ್ಕಂನ ಪ್ರೊ.ಅಬ್ರಾಹಂ ಅಲೆಕ್ಸ್ (48) ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾರ್ಥಿಗಳು ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಟ್ಟು ಹಿಡಿದಿದ್ದರಿಂದ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈತ ಪದೇ ಪದೇ ಡಬಲ್ ಮೀನಿಂಗ್ ಬಳಸಿ ವಿದ್ಯಾರ್ಥಿನಿಯರೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುತ್ತಿರುವುದಾಗಿ ಆರೋಪಿಸಲಾಗಿದೆ.
ಈ ಮೊದಲೇ ಆತನ ಕಾಮುಕತನದ ವಿರುದ್ಧ ದೂರಿದ್ದರೂ ಕಾಲೇಜಿನ ಆಡಳಿತ ಮಂಡಳಿ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ವಿದ್ಯಾರ್ಥಿನಿಯರು ದೂರಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸುವಲ್ಲಿ ಕಾಲೇಜು ಆಡಳಿತ ವಿಫಲವಾಗಿದ್ದು, ಪ್ರತಿಭಟನೆ ಮುಂದುವರೆಸಿದ್ದರಿಂದ ಆತನನ್ನು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.