ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲು ಸಜ್ಜಾಗಿದೆ 'ಸೋಡಾ ಶರ್ಬತ್'
Friday, December 31, 2021
ಮಂಗಳೂರು: ಪಿಬಿಪಿ ಫಿಲಂಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣಗೊಂಡ 'ಸೋಡಾ ಶರ್ಬತ್' ತುಳು ಸಿನಿಮಾ ಮಂಗಳೂರಿನ ಭಾರತ್ ಸಿನಿಮಾಸ್ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿತು.
ಕಾರ್ಯಕ್ರಮವನ್ನು ಶ್ರೀಕ್ಷೇತ್ರ ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ಉದ್ಘಾಟಿಸಿ, ಆಶೀರ್ವಚನ ನೀಡಿದರು. ಈ ಸಂದರ್ಭ ಸೋಡಾ ಶರ್ಬತ್ ಸಿನಿಮಾ ನಿರ್ದೇಶಕ ಪ್ರದೀಪ್ ಬಾರ್ಬೋಜಾ, ದೈಜಿವರ್ಲ್ಡ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ವಾಲ್ಟರ್ ನಂದಳಿಕೆ, ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, ನಟ ಹರ್ಷಿತ್ ಬಂಗೇರ, ಉಮೇಶ್ ಮಿಜಾರು ಮತ್ತಿತರರು ಉಪಸ್ಥಿತರಿದ್ದರು.
ತುಳು ಸಿನಿಮಾ ಲೋಕಕ್ಕೆ ನೂತನವಾಗಿ ಪಾದಾರ್ಪಣೆಗೈದಿರುವ ಹರ್ಷಿತ್ ಬಂಗೇರ ಈ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಅವರೊಂದಿಗೆ ನಾಯಕಿಯಾಗಿ ರಂಜಿತಾ ಲೂವೀಸ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗಳಲ್ಲಿ ದೇವದಾಸ್ ಕಾಪಿಕಾಡ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರ್ , ಉಮೇಶ್ ಮಿಜಾರು, ಪ್ರಸನ್ನ ಶೆಟ್ಟಿ ಬೈಲೂರು, ದೀಪಕ್ ರೈ ಪಾಣಾಜೆ , ರಮೇಶ್ ರೈ ಕುಕ್ಕುವಳ್ಳಿ, ಮೆಲ್ಲು ವೆಲೆನ್ಶಿಯಾ, ಲವೀನಾ ಫರ್ನಾಂಡೀಸ್, ಗೋಡ್ವಿನ್ ಬೆಳ್ಳೆ, ಮತ್ತಿತರರು ನಟಿಸಿದ್ದಾರೆ.
ಚಿತ್ರಕ್ಕೆ ಪ್ಯಾಟ್ಸನ್ ಪಿರೇರಾ ಮಂಗಳೂರು ಸಂಗೀತ ನಿರ್ದೇಶನವಿದ್ದು, ತ್ಯಾಗರಾಜ್ ಹಾಗೂ ಮತ್ತು ನೀತು ನಿನದ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ನಿಹಾಲ್ ತಾವ್ರೊ, ದೇವದಾಸ್ ಕಾಪಿಕಾಡ್, ಭೋಜರಾಜ ವಾಮಂಜೂರು ಜೊತೆಗೂಡಿ ಹಾಡಿದ್ದಾರೆ. ಸಿನಿಮಾ ಸಂಕಲನವನ್ನು ಗಣೇಶ್ ನೀರ್ಚಾಲ್ ಸಂಕಲನಕಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಉಮೇಶ್ ಮಿಜಾರು ಹಾಗೂ ಅಭಿಷೇಕ್ ಶೆಟ್ಟಿ ಸಾಹಿತ್ಯ ಬರೆದಿದ್ದಾರೆ.
ಮೂಡುಬಿದಿರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಸಾಲಗಾರನೊಬ್ಬ ಸಾಲದ ಸುಳಿಯಿಂದ ಯಾವ ರೀತಿ ಪಾರಾಗುತ್ತಾನೆ ಎಂಬ ಕಥಾ ಹಂದರವನ್ನು ಸಿನಿಮಾ ಹೊಂದಿದೆ. ಜೊತೆಗೆ ಪ್ರೀತಿ, ಪ್ರೇಮದ ಎಳೆಯೂ ಈ ಚಿತ್ರದಲ್ಲಿದೆ. ಸಿನಿಮಾ ಚಿತ್ರರಸಿಕರನ್ನು ನಗೆಗಡಲಿನಲ್ಲಿ ತೇಲಿಸುತ್ತಿದ್ದು, ಪ್ರೇಕ್ಷಕರನ್ನು ಸೆಳೆಯಲು ಸಫಲವಾಗಿದೆ.