ಬಿಳಿಗೂದಲಿಗೆ ಹೇರ್ ಡೈ ಮಾಡದೆ ಮದುವೆ ಮಂಟಪಕ್ಕೆ ಬಂದ ವಧು: ನಟರೋರ್ವರ ಪುತ್ರಿಯ ನಿರ್ಧಾರಕ್ಕೆ ಮನಸೋತ ನೆಟ್ಟಿಗರು!
Saturday, December 18, 2021
ನವದೆಹಲಿ: ತಮ್ಮ ಮದುವೆಯ ದಿನ ವಿಶಿಷ್ಟವಾಗಿಯೂ, ಅತ್ಯಂತ ಸುಂದರವಾಗಿ ಕಾಣಿಸಬೇಕೆಂದು ವಧೂ - ವರರು ಬಯಸುತ್ತಲೇ ಇರುತ್ತಾರೆ. ಅದರಲ್ಲಿಯೂ ಇತ್ತೀಚೆಗೆ ವಧುವಿನ ಅಲಂಕಾರಕ್ಕಂತೂ ಸಾವಿರಾರು ರೂ. ಖರ್ಚು ಮಾಡುವುದಿದೆ. ಮೇಕಪ್, ಹೇರ್‌ಡ್ರೆಸ್ ಎಂದೆಲ್ಲಾ ದಿನವಿಡೀ ನಡೆಯುವ ಅಲಂಕಾರಕ್ಕೆ ಪ್ರಸಿದ್ಧ ಬ್ಯೂಟಿಷಿಯನ್ ಮೊರೆ ಹೋಗುತ್ತಾರೆ. ಆದರೆ ನಟರೊಬ್ಬರು ಪುತ್ರಿಯೋರ್ವರು ಇದಕ್ಕೆಲ್ಲಾ ಸೆಡ್ಡು ಹೊಡೆಯುವಂತೆ ಮದುವೆಯಾಗಿದ್ದಾರೆ.
ಇದೀಗ ಜಾಲತಾಣದಲ್ಲಿ ಆಕೆ ಈ ಮೂಲಕ ಭಾರಿ ಸುದ್ದಿಯಲ್ಲಿದ್ದಾರೆ. ಕಪ್ಪು ಬಣ್ಣವೇ ನಮ್ಮ ಹೆಮ್ಮೆ ಎಂದು ಅಭಿಯಾನ ಆರಂಭವಾಗಿರುವ ಈ ಹೊತ್ತಿನಲ್ಲಿ, ನಟನ ಪುತ್ರಿಯೋರ್ವರು ಹೊಸದೊಂದು ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಆಕೆಯ ಈ ನಿರ್ಧಾರಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.
ಹಿಂದಿಯ ಪ್ರಸಿದ್ಧ ಧಾರಾವಾಹಿ ‘ತಾರಕ್ ಮೆಹ್ತಾ ಕಾ ಉಲ್ಟಾ ಚಷ್ಮಾ’ದ ಮೂಲಕ ಮಕ್ಕಳಿಂದ ವೃದ್ಧರವರೆಗೂ ಮನಸೂರೆಗೊಂಡ ನಟನೆಂದರೆ ಇದರ ಹೀರೋ ಜೇಠಾಲಾಲ್. ಇವರ ನಿಜವಾದ ಹೆಸರು ದಿಲೀಪ್ ಜೋಶಿ. ತಮ್ಮ ಅಮೋಘ ಅಭಿನಯದ ಮೂಲಕ ಎಲ್ಲರ ಮನಗೆದ್ದಿರುವ ದಿಲೀಪ್ ಪುತ್ರಿ ನಿಯತಿ ಈಗ ನೆಟ್ಟಿಗರ ಮನಗೆದ್ದಿದ್ದಾರೆ.
ಇದಕ್ಕೆ ಕಾರಣ ಆಕೆಗೆ ಚಿಕ್ಕವಯಸ್ಸಿನಲ್ಲಿಯೇ ಬಿಳಿಕೂದಲು ಮೂಡಲು ಆರಂಭಿಸಿದೆ. ಆದರೂ ಆಕೆ ಹೇರ್ ಡೈ ಮಾಡದೆಯೇ ವಿವಾಹವಾಗಿದ್ದಾರೆ. ಮದುಮಗಳ ಧಿರಿಸಿನಲ್ಲಿ ಬಿಳಿಕೂದಲಿಗೆ ಹೇರ್ ಡೈ ಮಾಡದೆ ಮಂಟಪಕ್ಕೆ ಬಂದಾಗ ನಿಯತಿಯನ್ನು ನೋಡಿ ಅಲ್ಲಿದ್ದವರು ಅಚ್ಚರಿಗೊಂಡಿದ್ದಾರೆ. ಆದರೆ ಇರುವುದೇ ಉಂಟಂತೆ, ಇನ್ನೇಕೆ ಕೃತಕ ಸೌಂದರ್ಯ ಎಂದಿರುವ ನಿಯಮ, ಹೇರ್ ಡೈ ಮಾಡಿಕೊಳ್ಳಲಿಲ್ಲ,ಅವರ ಮುಖದಲ್ಲಿ ರಾಚುವಷ್ಟು ಮೇಕಪ್ ಕೂಡ ಇರಲಿಲ್ಲ. ಸಹಜ ಸೌಂದರ್ಯದಲ್ಲಿಯೇ ಮದುವೆಯಾಗಿದ್ದಾರೆ.
ಈ ಫೋಟೋವನ್ನು ದಿಲೀಪ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಶರೀರಕ್ಕೆ ಬಿಳಿ ಬಣ್ಣವೇ ಅಂದ ಎಂಬ ಮಾತನ್ನು ಧಿಕ್ಕರಿಸಿ ಈಗಾಗಲೇ ಹಲವಾರು ಕೃಷ್ಣ ಸುಂದರಿಯರು ಮಿಂಚುತ್ತಿದ್ದಾರೆ. ಈ ಬಗ್ಗೆ ದೊಡ್ಡ ಅಭಿಯಾನವೇ ಶುರುವಾಗಿರುವ ಈ ಹೊತ್ತಿನಲ್ಲಿ ತಲೆಗೂದಲು ಕಪ್ಪಿದ್ದರಷ್ಟೇ ಅಂದ ಎಂಬ ಮಾತನ್ನೂ ಮೀರಿ ನಿಯತಿ ಇಂಥದ್ದೊಂದು ಹೊಸತನಕ್ಕೆ ನಾಂದಿ ಹಾಡಿದ್ದಾರೆ.
ಅಂದಹಾಗೆ ನಿಯತಿ, ಯಶೋವರ್ಧನ್ ಮಿಶ್ರಾ ಎಂಬವರನ್ನು ವಿವಾಹವಾಗಿದ್ದಾರೆ. ನಾಸಿಕ್‍ನಲ್ಲಿ ಗುಜರಾತಿ ಸಂಪ್ರದಾಯದಂತೆ ಮದುವೆ ನಡೆಯಿತು. ಇಲ್ಲಿರುವ ಊಟೋಪಚಾರಕ್ಕಿಂತ ಸುದ್ದಿಯಾದದ್ದು ನಿಯತಿ ಅವರ ಡ್ರೆಸ್. ನಿಮ್ಮ ಸೌಂದರ್ಯದ ಬಗ್ಗೆ ನಿಮಗಿರುವ ಆತ್ಮವಿಶ್ವಾಸ. ಬಿಳಿ ಕೂದಲಿನಲ್ಲೇ ನೀವು ಮದುಮಗಳಾಗಿ ಸಿದ್ಧಗೊಂಡಿರುವ ರೀತಿ ಮೆಚ್ಚುವಂತದ್ದು ಎಂದು ಸೋಶಿಯಲ್ ಮೀಡಿಯಾದಲ್ಲಿ ಫೋಟೋಗೆ ಕಾಮೆಂಟ್ ಮಾಡಿದ್ದಾರೆ.