ಈ ಬಾವಿಗೆ ಏನೇ ವಸ್ತುಗಳನ್ನು ಹಾಕಿದರೂ ಅದು ಕಲ್ಲಾಗುತ್ತಂತೆ: ಏನಿದು ಸೃಷ್ಟಿಯ ವೈಚಿತ್ರ್ಯ, ಅಂತದ್ದೇನಿದೆ ಈ ಬಾವಿಯಲ್ಲಿ?
Thursday, December 2, 2021
ಕೆನರ್ಸ್‌ಬರ್ಗ್: ಸೃಷ್ಟಿಯ ವೈಚಿತ್ರ್ಯವೇ ಕೌತುಕಮಯದಿಂದ ಕೂಡಿದೆ. ಇಡೀ ಪ್ರಕೃತಿಯೇ ವಿಚಿತ್ರದ ಗೂಡಾಗಿದ್ದು, ಇಲ್ಲಿ ಎಲ್ಲವೂ ವೈಶಿಷ್ಟ್ಯವೇ. ಆದರೆ ಕೆಲವೊಂದು ವಿಚಿತ್ರಗಳು ತರ್ಕಕ್ಕೆ ನಿಲುಕದ್ದು, ನಿಗೂಢವೂ ಆಗಿರುತ್ತದೆ. ಇದೆಂಥಹ ವಿಚಿತ್ರಾ ಎಂದು ನಮ್ಮನ್ನು ಚಿಂತನೆಗೆ ತಳ್ಳಿ ಬಿಡುತ್ತದೆ. ಅಷ್ಟೇ ಅಲ್ಲದೆ, ಹೀಗಾಗೋಕೆ ಹೇಗೆ ಸಾಧ್ಯ ಎನ್ನುವ ಹಾಗೆ ನಮ್ಮನ್ನು ಆಲೋಚನೆಗೆ ಮುಳುಗಿಸಿಬಿಡುತ್ತವೆ.
ಇಂಥದ್ದೊಂದು ಕೌತುಕವು ಇಂದು
ಇಂಗ್ಲೆಂಡ್‌ನ ಬಾವಿವೊಂದರ ಸುತ್ತ ಸೃಷ್ಟಿಯಾಗಿದೆ. ಈ ಬಾವಿಯೊಳಗೆ ಯಾರು ಏನನ್ನೇ ಹಾಕಿದರೂ ಅದು ಕಲ್ಲಾಗಿ ಹೋಗುತ್ತದೆ. ಗೊಂಬೆಗಳು, ಶೂ, ಸೈಕಲ್, ಚಪ್ಪಲಿ ಹೀಗೆ ಯಾವ ವಸ್ತುಗಳನ್ನು ಹಾಕಿದ್ದರೂ ವಾಪಾಸ್ ತೆಗೆದಾಗ ಅದು ಕಲ್ಲಾಗುತ್ತದೆ.
ಕೆನರ್ಸ್‌ಬರ್ಗ್‌ನ ಉತ್ತರ ಯಾರ್ಕ್ ಶೈರ್ ಪ್ರದೇಶದಲ್ಲಿ ಈ ಬಾವಿಯಿದೆ. ಯಾವುದೋ ಶಾಪದಿಂದ ಹೀಗೆಲ್ಲಾ ಆಗುತ್ತಿದೆ ಎಂದು ಇಲ್ಲಿನ ಜನತೆ ಇದನ್ನು ನಂಬುತ್ತಾರೆ. ಕುತೂಹಲ ಹೆಚ್ವು ಇರುವವರು ಯಾರೇ ಆಗಲಿ ಈ ರೀತಿ ಬಾವಿ ಬಗ್ಗೆ ಕೇಳಿದಾಗ ತಮ್ಮದೊಂದು ವಸ್ತುವನ್ನು ಹಾಕಿ ಪರೀಕ್ಷಿಸೋಣ ಎಂದೆನಿಸುತ್ತದೆ. ಅದೇ ರೀತಿ ತಮ್ಮಿಷ್ಟದ ವಸ್ತುಗಳಿಗೆ ದೊಡ್ಡ ಹಗ್ಗವನ್ನು ಕಟ್ಟಿ ಬಾವಿಯೊಳಗೆ ಇಳಿ ಬಿಟ್ಟಿದ್ದಾರೆ. ಮುಂದಿನ ಆರು ತಿಂಗಳಲ್ಲಿ ಅದೇ ವಸ್ತು ಕಲ್ಲಾಗಿರುತ್ತದೆ.
ಈ ವಿಸ್ಮಯ ಬಾವಿಯ ಬಗ್ಗೆ ಅಲ್ಲಿನ ಸ್ಥಳೀಯರಿಗೆ ಬೇರೆ ಬೇರೆ ರೀತಿಯ ನಂಬಿಕೆ ಇದೆ. ಕೆಲವರು ಈ ಬಾವಿಯಲ್ಲಿ ನಕಾರಾತ್ಮಕ ಶಕ್ತಿ ಇದ್ದು, ಅದೇ ಇದಕ್ಕೆಲ್ಲಾ ಕಾರಣ ಎಂದು ಹೇಳುತ್ತಾರೆ. ಇನ್ನೂ ಕೆಲವರು ಬಾವಿ ನೋಡುವುದಕ್ಕೆ ತಲೆಬುರುಡೆಯಂತೆ ಕಾಣುತ್ತದೆ. ಆದ್ದರಿಂದ ಇದೊಂದು ರಾಕ್ಷಸನ ಬಾಯಿಯೇ ಹೊರತು ಬಾವಿಯಲ್ಲ ಎಂದು ಹೇಳುತ್ತಾರೆ.
ಮನುಷ್ಯನಿಗೆ ಕುತೂಹಲ ಎಷ್ಟೇ ಇರಬಹುದು. ಆದರೆ ಜೀವ ಪಣಕ್ಕಿಡುವಷ್ಟು ಕುತೂಹಲ ಅಷ್ಟೊಂದು ಒಳ್ಳೆಯದಲ್ಲ. ವಸ್ತುಗಳನ್ನು ಎಸೆಯುವಾಗ ಅಪ್ಪಿ ತಪ್ಪಿ ಯಾರಾದರೂ ಬಿದ್ದರೆ ಅವರೂ ಕಲ್ಲಾಗುತ್ತಾರೆ ಎನ್ನುವ ಭಯ ಇವರಿಗಿದೆ. ಹಾಗಾಗಿ ಈ ಬಾವಿ ಬಳಿ ಯಾರೂ ಹೋಗೋದಿಲ್ಲ.
ಈ ಬಾವಿ ಬಗ್ಗೆ ಎಷ್ಟೇ ನಕಾರಾತ್ಮಕ, ವಿಚಿತ್ರ ಸುದ್ದಿಗಳಿದ್ದರೂ, ಕೆಲವರು ಈ ಬಾವಿಯ ನೀರು ಸಂಜೀವಿನಿ ಎಂದು ನಂಬುತ್ತಾರೆ. ಈ ಬಾವಿ ನೀರನ್ನು ಕುಡಿದರೆ ಆರೋಗ್ಯ ವೃದ್ಧಿಯಾಗುತ್ತದೆ. ರೋಗ ನಿವಾರಣೆ ಆಗುತ್ತದೆ ಎನ್ನುತ್ತಾರೆ. ಇಷ್ಟೆಲ್ಲಾ ಈ ಬಾವಿ ಫೇಮಸ್ ಆದ ಬಳಿಕ ಇದೀಗ ಇಲ್ಲಿಗೆ ವಿಜ್ಞಾನಿಗಳು ಭೇಟಿ ನೀಡಿದ್ದಾರೆ. ಈ ನೀರಿನಲ್ಲಿ ಅತೀ ಹೆಚ್ಚು ಮಿನರಲ್ಸ್ ಇದೆ. ಇದರಿಂದಾಗ ವಸ್ತುಗಳು ಕಲ್ಲಿನಂತೆ ಕಾಣಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದೀಗ ಬಾವಿಯಿರುವ ತಾಣ ಪ್ರವಾಸಿ ಸ್ಥಳವಾಗಿದೆ. ಬ್ಯಾರಿಕೇಡ್ ಹಾಕಿ ಜನರಿಗೆ ಕಲ್ಲಾಗಿರುವ ವಸ್ತುಗಳನ್ನು ನೋಡಲು ಅವಕಾಶ ನೀಡಲಾಗಿದೆ.