ಅಳಿಯನ ಮನೆಮುಂದೆಯೇ ಸೆಲ್ಫಿ ವೀಡಿಯೋ ಮಾಡಿ ನೇಣಿಗೆ ಶರಣಾದ ಮಾವ!
Friday, December 10, 2021
ಹಾಸನ: ಪುತ್ರಿಯ ಹಠಾತ್ ನಿಧನದಿಂದ ಮನನೊಂದು ಅಳಿಯನ ಮನೆಯ ಮುಂದೆಯೇ ಮಾವ ನೇಣಿಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಬೇಲೂರು ತಾಲ್ಲೂಕಿನ ಮಾಳೆಗೆರೆ ಗ್ರಾಮದಲ್ಲಿ ನಡೆದಿದೆ.
ಎಸ್.ಸೋಮನಹಳ್ಳಿಯ ನಾಗರಾಜ್ (55) ಮೃತ ವ್ಯಕ್ತಿ.
ನಾಗರಾಜ್ ಅವರು ತಮ್ಮ ಪುತ್ರಿಗೆ ಪ್ರಿಯವಾಹ ಆಹಾರ ಪದಾರ್ಥಗಳನ್ನು ಎಡೆಯಿಟ್ಟು ಅಳಿಯನ ಮನೆಯ ಬಾಗಿಲಿನಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವರ್ಷದ ಹಿಂದಷ್ಟೇ ನಾಗರಾಜ್ ತಮ್ಮ ಪುತ್ರಿ ಹೇಮಶ್ರಿಯನ್ನು ಮಾಳೆಗೆರೆಯ ಪ್ರವೀಣ್ ಎಂಬಾತನಿಗೆ ವಿವಾಹ ಮಾಡಿಕೊಟ್ಟಿದ್ದರು. ಆರಂಭದಲ್ಲಿ ಇವರಿಬ್ಬರ ಸಂಸಾರ ಚೆನ್ನಾಗಿಯೇ ನಡೆಯುತ್ತಿತ್ತು. ತವರು ಮನೆಯವರು ಮಗಳು ಗರ್ಭಿಣಿಯಾದ ಖುಷಿಯಲ್ಲಿದ್ದರೆ, ಅಳಿಯ ಮಾತ್ರ ಮಗಳ ಗರ್ಭಪಾತಕ್ಕೆ ಯತ್ನಿಸಿದ್ದ ಎಂದು ಮೃತ ನಾಗರಾಜ ಕುಟುಂಬ ಆರೋಪಿಸಿದೆ. ಮಗಳಿಗೆ ಅತ್ತೆಯ ಮನೆಯವರು ಬಹಳ ಕಿರುಕುಳ ನೀಡಿದ್ದರಿಂದ ಆಕೆ ಹೆರಿಗೆ ಸಮಯದಲ್ಲಿ ಸಾವಿಗೀಡಾಗಿದಳು ಎಂದು ಪಾಲಕರು ದೂರಿದ್ದಾರೆ. ಆಕೆ ಮೃತಪಟ್ಟ ಮಗಳ ಮರಣಾನಂತರದ ತಿಥಿ ಕಾರ್ಯಗಳನ್ನು ಕೂಡ ಆಕೆಯ ಪತಿ ಮನೆಯವರು ಸರಿಯಾಗಿ ಮಾಡಿಲ್ಲ ಎಂದು ನಾಗರಾಜ್ ಮನನೊಂದಿದ್ದರು.
ಅಲ್ಲದೆ, ಅಳಿಯ ಪಡೆದಿದ್ದ 2 ಲಕ್ಷ ರೂ. ಸಾಲವನ್ನು ಹಿಂದಿರುಗಿಸದೆ, ಸತಾಯಿಸುತ್ತಿದ್ದರಿಂದ ಅವರು ಬೇಸತ್ತಿದ್ದರು. ಒಂದೆಡೆ ಪುತ್ರಿಯ ಸಾವಿನ ನೋವು, ಮತ್ತೊಂದೆಡೆ ಆಕೆಯ ಮೃತಪಟ್ಟ ಬಳಿಕದ ಕಾರ್ಯಗಳು ಸರಿಯಾಗಿ ನಡೆಯದ ಹಿನ್ನೆಲೆಯಲ್ಲಿ ಅವರು ಬಹಳ ಮನನೊಂದಿದ್ದರು. ಇದರಿಂದ ಕುಗ್ಗಿ ಹೋಗಿದ್ದ ನಾಗರಾಜ್, ಹಾಡ ಹಗಲಿನಲ್ಲೇ ಅಳಿಯನ ಮನೆ ಮುಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಸೆಲ್ಫಿ ವೀಡಿಯೋ ಮಾಡಿ, ಅಳಿಯ, ಆತನ ತಾಯಿ ಹಾಗೂ ಸಂಬಂಧಿಕರ ವಿರುದ್ಧ ಆರೋಪ ಮಾಡಿದ್ದಾರೆ.
ಅಳಿಯ ಪ್ರವೀಣ್, ಬೀಗರಾದ ಭದ್ರಮ್ಮ ಹಾಗೂ ಅವರ ಸಂಬಂಧಿ ವಿರುದ್ಧ ಮಾನಸಿಕ ಕಿರುಕುಳ ಆರೋಪ ಮಾಡಿದ್ದು, ಮೂವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾಗರಾಜ್ ಸೆಲ್ಫಿ ವಿಡಿಯೋದಲ್ಲಿ ಆರೋಪ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಬೇಲೂರು ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.