ಮಂಗಳೂರು: ನೇಣಿಗೆ ಕುಣಿಕೆಯೊಡ್ಡಿದ ಬಿಹಾರ ಮೂಲದ ಎನ್ಐಟಿಕೆ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ !
Sunday, December 26, 2021
ಮಂಗಳೂರು: ನಗರದ ಎನ್ಐಟಿಕೆಯಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿದ್ದ ಬಿಹಾರ ಪಾಟ್ನಾ ಮೂಲದ ವಿದ್ಯಾರ್ಥಿಯೋರ್ವನು ನೇಣಿಗೆ ಕೊರಳೊಡ್ಡಿರುವ ಘಟನೆ ಇಂದು ನಡೆದಿದೆ.
ಪಾಟ್ನಾ ಮೂಲದ, ಎನ್ಐಟಿಕೆಯಲ್ಲಿ 2ನೇ ವರುಷದ ಇಲೆಕ್ಟ್ರಿಕಲ್ ಹಾಗೂ ಇಲೆಕ್ಟ್ರಾನಿಕ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಸೌರವ್(19) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ.
ಸೌರವ್ ಸುರತ್ಕಲ್ ಎನ್ಐಟಿಕೆ ಹಾಸ್ಟೆಲ್ ನಲ್ಲಿಯೇ ಇದ್ದುಕೊಂಡು ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ. ಹಾಸ್ಟೆಲ್ ನಲ್ಲಿದ್ದ ಸೌರವ್ ಇಂದು ಬೆಳಗ್ಗೆ ಏಳದಿರುವುದನ್ನು ಕಂಡು ಉಳಿದ ವಿದ್ಯಾರ್ಥಿಗಳು ಬಾಗಿಲು ಬಡಿದಿದ್ದಾರೆ. ಆದರೆ ಆತ ಬಾಗಿಲು ತೆರೆಯಲೇ ಇಲ್ಲ. ಇದರಿಂದ ಅನುಮಾನಗೊಂಡು ಕಿಟಕಿಯಲ್ಲಿ ನೋಡಿದಾಗ ಆತ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಈ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಸಿದ ಸಂದರ್ಭ ಆತ ಬರೆದಿಟ್ಟ ಡೆತ್ ನೋಟ್ ಲಭ್ಯವಾಗಿದೆ. ಆತ ಡೆತ್ ನೋಟ್ ನಲ್ಲಿ 'ತನ್ನ ತಲೆಯಲ್ಲಿ ಯಾವುದೋ ರಾಸಾಯನಿಕ ಪ್ರತಿಕ್ರಿಯೆ ನೀಡುವಂತಾಗುತ್ತಿದೆ. ಅಲ್ಲದೆ ತಾನು ಸಾಲ ಮಾಡಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದೇನೆ. ಆದರೆ ವ್ಯಾಸಂಗ ಮುಗಿದ ಬಳಿಕ ಉದ್ಯೋಗ ದೊರಕುತ್ತೋ ಎಂಬ ಅನುಮಾನ ಕಾಡಲಾರಂಭಿಸಿದೆ ಎಂದು ಹೇಳಿ, ತನ್ನ ಸಾವಿಗೆ ತಾನೇ ಕಾರಣ' ಎಂದು ತಂದೆಗೆ ಪತ್ರ ಬರೆದಿದ್ದಾನೆ.
ಮೃತನ ಪೋಷಕರು ತೀರಾ ಬಡವರಾಗಿದ್ದು, ಪಾಟ್ನಾಕ್ಕೆ ಆತನ ಮೃತದೇಹವನ್ನು ಕೊಂಡೊಯ್ಯಲಾಗದೆ ಮಂಗಳೂರಿನಲ್ಲಿಯೇ ಅಂತ್ಯಸಂಸ್ಕಾರ ನಡೆಸುವಂತೆ ಕೇಳಿಕೊಂಡಿದ್ದರು. ಆದರೆ ಎನ್ಐಟಿಕೆ ಶಿಕ್ಷಣ ಸಂಸ್ಥೆ, ಪ್ರಾಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಣಕಾಸಿನ ವ್ಯವಸ್ಥೆ ಮಾಡಿ ಆತನ ಪೋಷಕರನ್ನು ಕರೆಸಿಕೊಂಡು, ಮೃತದೇಹವನ್ನು ಪಾಟ್ನಾಕ್ಕೆ ಕಳುಹಿಸಿ ಕೊಡುವ ವ್ಯವಸ್ಥೆ ಮಾಡಿದ್ದಾರೆ. ಆತನ ಪೋಷಕರು ಆತ್ಮಹತ್ಯೆ ಬಗ್ಗೆ ಯಾವುದೇ ಅನುಮಾನವನ್ನು ವ್ಯಕ್ತಪಡಿಸಲಿಲ್ಲವೆಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ತಿಳಿಸಿದ್ದಾರೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.