'ನಿನಗಿನ್ನೂ ಸಣ್ಣ ವಯಸ್ಸು, ಪ್ರೀತಿ ಪ್ರೇಮವೆಲ್ಲ ಬೇಡ' ಎಂದು ಹೆತ್ತವರು ಬುದ್ಧಿ ಹೇಳಿದರೂ, ಪ್ರೀತಿಸಿದಾತನೊಂದಿಗೆ ದುರಂತ ಅಂತ್ಯಕಂಡ ಎಸ್ಎಸ್ಎಲ್ ಸಿ ವಿದ್ಯಾರ್ಥಿನಿ
Tuesday, December 21, 2021
ರಾಮನಗರ: ಆಕೆಗಿನ್ನೂ ಹದಿನಾರರ ವಯಸ್ಸು, ಎಸ್ಎಸ್ಎಲ್ ಸಿ ಓದುತ್ತಿದ್ದಳು. ಆದರೆ ಪ್ರೀತಿಯ ಬಲೆಗೆ ಬಿದ್ದಿದ್ದಳು. 'ಮಗಳೇ ನಿನ್ನದಿನ್ನೂ ಸಣ್ಣ ವಯಸ್ಸು, ಪ್ರೀತಿ ಪ್ರೇಮ ಎಲ್ಲಾ ಬೇಡ ಕಣವ್ವಾ.. ಬುಟ್ಬುಡು' ಎಂದು ಪೋಷಕರು ಅವಲತ್ತುಕೊಂಡರೂ, ಆಕೆ ಕೇಳಲೇ ಇಲ್ಲ. ಅವಳ ಮನಸ್ಸು ಅವನ ಮೇಲೆಯೇ ನೆಟ್ಟಿತ್ತು. ಕೊನೆಗೂ ಆಕೆ ಆತನೊಂದಿಗೇ ದುರಂತವಾಗಿ ಅಂತ್ಯ ಕಂಡುಕೊಂಡಿರುವ ಮನಕಲಕುವ ಘಟನೆ ರಾಮನಗರ ಹೊರವಲಯದ ರಾಮದೇವರಬೆಟ್ಟದಲ್ಲಿ ಸಂಭವಿಸಿದೆ.
ರಾಮನಗರ ತಾಲೂಕಿನ ಸುಗ್ಗನಹಳ್ಳಿಯ ಕಾವ್ಯಾ(16) ಹಾಗೂ ದೇವರಸೇಗೌಡನದೊಡ್ಡಿಯ ಹರೀಶ್(26) ಇಬ್ಬರೂ ಪರಸ್ಪರ ಪ್ರೀತಿಯ ಬಲೆಗೆ ಬಿದ್ದಿದ್ದರು. ಹರೀಶ್ ಕಾರು ಚಾಲಕನಾಗಿ ವೃತ್ತಿ ನಿರ್ವಹಿಸುತ್ತಿದ್ದರೆ, ಕಾವ್ಯಾ ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಯಾಗಿದ್ದಳು. ಓದುವ ವಯಸ್ಸಿಗೆ ಪುತ್ರಿ ಪ್ರೀತಿಯ ಬಲೆಗೆ ಸಿಲುಕಿರುವ ವಿಚಾರ ಪಾಲಕರಿಗೆ ತಿಳಿದು ಅವರು ಆತಂಕಕ್ಕೀಡಾಗಿದ್ದಾರೆ.
ಪ್ರೇಮಿಗಳಿಬ್ಬರು ತಮಗೆ ಮದುವೆ ಮಾಡಿಕೊಡುವಂತೆ ಕುಟುಂಬಸ್ಥರನ್ನು ಕೇಳಿದ್ದಾರೆ. ಆದರೆ ಇದಕ್ಕೆ ಕುಟುಂಬಸ್ಥರಿಂದ ಒಪ್ಪಿಗೆ ದೊರಕಿರಲಿಲ್ಲ. ಬಾಲಕಿ ಇನ್ನೂ ಅಪ್ರಾಪ್ತಳಾಗಿರುವ ಕಾರಣ ಎರಡೂ ಮನೆಯಲ್ಲಿ ಮದುವೆಗೆ ವಿರೋಧವಿತ್ತು. ಇದರಿಂದ ಮನನೊಂದ ಪ್ರೇಮಿಗಳು ರವಿವಾರ ಮನೆಯಿಂದ ಹೊರ ಹೋಗಿ ಮದುವೆ ಮಾಡಿಕೊಂಡಿದ್ದಾರೆ. ಬಳಿಕ ರಾಮದೇವರ ಬೆಟ್ಟಕ್ಕೆ ತೆರಳಿದ್ದಾರೆ.
ಇತ್ತ ಮನೆಯಲ್ಲಿ ಬಾಲಕಿ ಕಾವ್ಯಾ ನಾಪತ್ತೆಯಾಗಿರುವುದರಿಂದ ಆತಂಕಕ್ಕೀಡಾದ ಪಾಲಕರು ಮಹಿಳಾ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಈ ವೇಳೆ ಹುಡುಕಾಟ ನಡೆಸಿದ ಸಂದರ್ಭದಲ್ಲಿ ರಾಮದೇವರ ಬೆಟ್ಟದ ಮರವೊಂದಕ್ಕೆ ಪ್ರೇಮಿಗಳಿಬ್ಬರೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಇರುವುದು ಸೋಮವಾರ ಬೆಳಕಿಗೆ ಬಂದಿದೆ.
ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.