ಮಕ್ಕಳಾಗದ ವಿಚಾರಕ್ಕೆ ಟೆಕ್ಕಿ ಪತಿಯಿಂದ ಕಿರುಕುಳ: ಸಾಫ್ಟ್‌ವೇರ್ ಇಂಜಿನಿಯರ್ ಪತ್ನಿ ಆತ್ಮಹತ್ಯೆ
Saturday, December 11, 2021
ಬೆಂಗಳೂರು: ಪತಿಯ ಕಿರುಕುಳಕ್ಕೆ ಬೇಸತ್ತು ಪತ್ನಿ ನೇಣಿಗೆ ಶರಣಾಗಿರುವ ಘಟನೆ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ವೀರಣ್ಣಪಾಳ್ಯ ಎಂಬಲ್ಲಿ ನಡೆದಿದೆ.
ಮಂಡ್ಯ ಮೂಲದ ಸಂಗೀತಾ (26) ನೇಣಿಗೆ ಶರಣಾದ ಯುವತಿ.
ಮಂಡ್ಯ ಮೂಲದ ಸಂಗೀತಾ ಕಳೆದ 4 ವರ್ಷಗಳಿಂದ ನೆಲಮಂಗಲ ಮೂಲದ ವಿನಯ್ ಎಂಬಾತನನ್ನು ಪ್ರೀತಿಸುತ್ತಿದ್ದು, ಒಂದೂವರೆ ವರ್ಷಗಳ ಹಿಂದೆ ಇಬ್ಬರೂ ಮದುವೆಯಾಗಿದ್ದರು. ಆರಂಭದಲ್ಲಿ ಅನೋನ್ಯವಾಗಿದ್ದ ದಂಪತಿ ಮಧ್ಯೆ ಕಾಲಕ್ರಮೇಣ ಮಕ್ಕಳಾಗದ ವಿಚಾರಕ್ಕಾಗಿ ಅಸಮಾಧಾನ ಉಂಟಾಗಿತ್ತು.
ವೀರಣ್ಣನಪಾಳ್ಯದಲ್ಲಿ ವಾಸವಾಗಿದ್ದ ದಂಪತಿ ಇಬ್ಬರೂ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ವೃತ್ತಿ ನಿರ್ವಹಿಸುತ್ತಿದ್ದರು. ಮಗುವಾಗಿಲ್ಲ ಎಂಬ ವಿಚಾರಕ್ಕಾಗಿ ಪತಿ ವಿನಯ್ ಕಿರುಕುಳ ನೀಡುತ್ತಿದ್ದ ಎಂದು ಡೆತ್ ನೋಟ್ ಬರೆದಿಟ್ಟು, ನಿನ್ನೆ ಸಂಜೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಅಮೃತಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿನಯ್ ನನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.