
ತಂಗಿಗೆ ವಾಯ್ಸ್ ಮೆಸೇಜ್ ಕಳುಹಿಸಿ ನೇಣಿಗೆ ಶರಣಾದ ಬಸ್ ಮಾಲಕ: ವಾಯ್ಸ್ ಮೆಸೇಜ್ ನಲ್ಲೇನಿತ್ತು?
Tuesday, December 14, 2021
ಸುಳ್ಯ: ಸುಳ್ಯದ ಗ್ರಾಮೀಣ ಸಂಪರ್ಕ ಕ್ರಾಂತಿಯ ಹರಿಕಾರ, ಅವಿನಾಶ್ ಮೋಟಾರ್ಸ್ ಸಂಸ್ಥೆಯ ಮಾಲಕ ನಾರಾಯಣ ರೈ(73) ಸೋಮವಾರ ರಾತ್ರಿ ನೇಣಿಗೆ ಶರಣಾಗಿದ್ದಾರೆ. ಅದಕ್ಕೂ ಮೊದಲು ಅವರು ತಮ್ಮ ತಂಗಿಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದಾರೆ.
ನಾರಾಯಣ ರೈಯವರ ಮೃತದೇಹದ ಪಕ್ಕದಲ್ಲಿ ಡೆತ್ನೋಟ್ ಕೂಡಾ ಪತ್ತೆಯಾಗಿದೆ. ಅದರಲ್ಲಿ ಅವರು, “ಅಸೌಖ್ಯದಿಂದ ತನಗೆ ಬದುಕಲು ಕಷ್ಟವಾಗುತ್ತಿದೆ. ಇದರಿಂದ ಮನೆಯವರಿಗೂ ಕಷ್ಟ ಕೊಡಲು ಮನಸ್ಸಿಲ್ಲ. ಆದ್ದರಿಂದ ನಿಮ್ಮನ್ನೆಲ್ಲ ಬಿಟ್ಟು ಹೋಗುತ್ತಿದ್ದೇನೆ. ನನ್ನ ಮರಣದ ನಿಮಿತ್ತ ಬಸ್ಗಳ ಓಡಾಟವನ್ನು ನಿಲ್ಲಿಸಬಾರದು. ಕಪ್ಪು ಫ್ಲ್ಯಾಗ್ ಹಾಕಿ ಬಸ್ ಓಡಿಸಬೇಕು’ ಎಂದು ಬರೆದಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ನಾರಾಯಣ ರೈಯವರು ಪಾರ್ಶ್ವವಾಯು ಕಾಯಿಲೆಗೆ ತುತ್ತಾಗಿದ್ದರು. ನಿಧಾನಕ್ಕೆ ಚೇತರಿಸಿಕೊಂಡ ಅವರು ಕಾರಿನಲ್ಲಿ ಸುಳ್ಯಕ್ಕೆ ಬಂದು ಹೋಗುತ್ತಿದ್ದರು.
ಪೇರಾಲು ಪೂಜಾರಿಮೂಲೆ ರಾಮಣ್ಣ ರೈ ಮತ್ತು ಸೀತಮ್ಮ ರೈ ದಂಪತಿಯ ಪುತ್ರರಾದ ನಾರಾಯಣ ರೈ ಪ್ರೌಢ ಶಿಕ್ಷಣ ಬಳಿಕ ಮಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು. ಬಳಿಕ ಕೆಲಕಾಲ ಕೆಎಸ್ಆರ್ಟಿಸಿಯಲ್ಲಿ ಚಾಲಕರಾಗಿದ್ದ ಅವರು, ಸ್ವಯಂ ನಿವೃತ್ತಿ ಪಡೆದು ಬಸ್ ಖರೀದಿಸಿ ಗ್ರಾಮೀಣ ಭಾಗಗಳಿಗೆ ಸಂಚಾರ ಆರಂಭಿಸಿದರು.
ಇದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬಹಳ ಸಹಕಾರಿಯಾಗಿತ್ತು. ಉದ್ಯಮದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆದ ಅವರು ಇದೀಗ 18 ಬಸ್ಗಳ ಒಡೆಯರಾಗಿದ್ದರು. ಬೆಂಗಳೂರು, ಮಂಗಳೂರಿಗೂ ಬಸ್ ಓಡಿಸುತ್ತಿದ್ದರು. ವರ್ಷ ಕಳೆದಂತೆ ಉದ್ಯಮ ಅಷ್ಟು ಲಾಭದಾಯಕವಾಗಿಲ್ಲದ ಕಾರಣ ಅವರ ಬಸ್ ಸಂಚಾರ ಉದ್ಯಮ ಗ್ರಾಮೀಣ ಪ್ರದೇಶಗಳಿಗೆ ಸೀಮಿತಗೊಂಡಿತು.