Swad Sadhan- ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಹಾರ ಮೇಳ "ಸ್ವಾದ ಸಾಧನ"
ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ವಿಭಾಗದ ವಿದ್ಯಾರ್ಥಿ ಸಂಘ 'ಸಿವಿಯೇಶನ್' ವತಿಯಿಂದ "ಸ್ವಾದ ಸಾಧನ" ಆಹಾರ ಮೇಳ ಕಾಲೇಜಿನ ಆವರಣದಲ್ಲಿ ನಡೆಯಿತು.
ಆಳ್ವಾಸ್ ಪದವಿ ಕಾಲೇಜಿನ ಹೋಟೆಲ್ ಮ್ಯಾನೇಜ್ಮೆಂಟ್ ವಿಭಾಗದ ಮುಖ್ಯಸ್ಥ ಟೆರೆನ್ಸ್ ರಾಡ್ರಿಗಸ್ ಮೇಳವನ್ನು ಉದ್ಘಾಟಿಸಿದರು.
ಜನರ ಬದಲಾಗುತ್ತಿರುವ ಜೀವನ ಶೈಲಿಯಿಂದ, ಆಹಾರ, ತಿಂಡಿ ತಿನಿಸುಗಳ ಬಗ್ಗೆ ಬೇಡಿಕೆ ಹೆಚ್ಚಿದ್ದು, ಮುಂದಿನ ದಿನಗಳಲ್ಲಿ ಆಹಾರೋದ್ಯಮವು ಬೃಹತ್ತಾಗಿ ಬೆಳೆಯಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಆಳ್ವಾಸ್ ಶಿಕ್ಷಣ ಪ್ರತಿಷ್ಟಾನ ಮ್ಯಾನೆಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ತಾಂತ್ರಿಕ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳೆ ಆಯೋಜಿಸಿದ ಇಂತಹ ಕಾರ್ಯಕ್ರಮಗಳಿಂದ ಅವರ ಆತ್ಮಸ್ಥೈರ್ಯ ಹೆಚ್ಚಾಗಲಿದ್ದು ಮುಂದಿನ ಜೀವನಕ್ಕೆ ಉಪಯೋಗವಾಗಲಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ| ಪೀಟರ್ ಫೆರ್ನಾಂಡಿಸ್ ಮಾತನಾಡಿ, ಭಾರತೀಯ ಪರಂಪರೆ ಶೈಲಿಯ ಖಾದ್ಯಗಳ ಮಹತ್ವ, ಆಧುನಿಕ ಆಹಾರ ಪದ್ಧತಿ, ಆಹಾರ ಕ್ಷೇತ್ರದಲ್ಲಿ ಸಂಶೋಧನೆ ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಆಹಾರ ಮೇಳದಲ್ಲಿ ರಾಜ್ಯದ ವಿವಿಧ ಶೈಲಿಯ ಖಾದ್ಯಗಳು, ಈಶಾನ್ಯ ರಾಜ್ಯಗಳ ತಿಂಡಿ ತಿನಿಸುಗಳು, ವಿವಿಧ ರೀತಿಯ ಹಣ್ಣುಗಳ ಜ್ಯೂಸ್ ಗಳ ಮಾರಾಟ ನಡೆಯಿತು. ಕಾಲೇಜಿನ ನೂರಾರು ವಿದ್ಯಾರ್ಥಿಗಳು ಈ ಮೇಳದಲ್ಲಿ ಭಾಗಿಯಾದರು.
ಕಾರ್ಯಕ್ರಮದಲ್ಲಿ ಸಿವಿಲ್ ವಿಭಾಗ ಮುಖ್ಯಸ್ಥ ಡಾ. ಅಜಿತ್ ಹೆಬ್ಬಾರ್, ಕಾರ್ಯಕ್ರಮ ಸಂಯೋಜಕ ಪ್ರೊ. ರಮೇಶ್ ರಾವ್ ಉಪಸ್ಥಿತರಿದ್ದರು.