ಎಸ್ಎಸ್ಎಲ್ ಸಿ ವಿದ್ಯಾರ್ಥಿಯೊಂದಿಗೆ ಓಡಿ ಹೋಗಿ ಮದುವೆಯಾಗಿ ಪೇಚಿಗೆ ಸಿಲುಕಿದ ಶಿಕ್ಷಕಿ
Friday, December 31, 2021
ಚೆನ್ನೈ: ಗುರುವೆಂದರೆ ದೇವರಿಗೆ ಸಮಾನಾದವನು ಎನ್ನುತ್ತಾರೆ. ಗುರು ಶಿಷ್ಯರ ಸಂಬಂಧವು ಬಹಳ ಪವಿತ್ರವಾದುದು ಎನ್ನುತ್ತಾರೆ.
ಇದೀಗ ಅಂತಹ ಸಂಬಂಧವನ್ನೇ ಅಪವಿತ್ರಗೊಳಿಸುವ ಘಟನೆಯೊಂದು ತಮಿಳುನಾಡಿನ ಅರಿಯಾಲೂರು ಜಿಲ್ಲೆಯಲ್ಲಿ ನಡೆದಿದೆ.
ಶಿಕ್ಷಕಿಯೋರ್ವಳಿಗೆ ತನ್ನ 10ನೇ ತರಗತಿಯ ವಿದ್ಯಾರ್ಥಿಯೊಂದಿಗೆ ಪ್ರೀತಿ ಮೊಳೆತಿದೆ. ಇದಷ್ಟಲ್ಲದೆ ಇಬ್ಬರೂ ಇನ್ನೂ ಮುಂದುವರಿದು ಮದುವೆಯೂ ಆಗಿ ಇದೀಗ ಪೇಚಿಗೆ ಸಿಲುಕಿದ್ದಾರೆ. ಅರಿಯಾಲೂರು ಜಿಲ್ಲೆಯ ವಿಕ್ರಮಂಗಲಂ ಪ್ರೌಢಶಾಲೆಯಲ್ಲಿ ಈ ಶಿಕ್ಷಕಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. 10ನೇ ತರಗತಿಯಲ್ಲಿ ಓದುತ್ತಿರುವ ಹುಡುಗನೊಬ್ಬನ ಮೇಲೆ ಈ ಶಿಕ್ಷಕಿಗೆ ಪ್ರೀತಿಯುಂಟಾಗಿದೆ. ಆಕೆ ಬಾಲಕನಲ್ಲಿ ನಿವೇದನೆ ಮಾಡಿದ್ದಾಳೆ. ಆತನೂ ಶಿಕ್ಷಕಿಯ ಮೇಲೆ ಪ್ರೀತಿ ಮೂಡಿದೆ. ಹೀಗೆ ಇಬ್ಬರೂ ಕದ್ದುಮುಚ್ಚಿ ಭೇಟಿಯಾಗುತ್ತಿದ್ದರು. ಕೊನೆಗೆ ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ.
ಮಜವರಾಯನಲ್ಲೂರು ಗ್ರಾಮದ 17 ವರ್ಷದ ಈ ಬಾಲಕ ತಮ್ಮ ಪ್ರೀತಿಯ ವಿಚಾರವನ್ನು ಹಾಗೂ ಶಿಕ್ಷಕಿಯನ್ನು ಮದುವೆಯಾಗುವ ಬಗ್ಗೆ ಹೆತ್ತವರ ಬಳಿ ಹೇಳಿದ್ದಾನೆ. ಆದರೆ ಅವರು ನಿರಾಕರಿಸಿದ್ದಾರೆ. ಕೊನೆಗೆ ಇಬ್ಬರೂ ಓಡಿಹೋಗಿ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದಾರೆ. ಮದುವೆಯ ವಿಚಾರ ತಿಳಿಯುತ್ತಲೇ ಬಾಲಕನ ಪಾಲಕರು ಪೊಲೀಸ್ ದೂರು ಕೊಟ್ಟಿದ್ದಾರೆ.
ಇದೀಗ ಜೋಡಿಯನ್ನು ಬೆನ್ನತ್ತಿದ ಪೊಲೀಸರು ಶಿಕ್ಷಕಿಯನ್ನು ಬಂಧಿಸಿದ್ದಾರೆ. ಪೊಲೀಸರು ತಮ್ಮನ್ನು ಹುಡುಕಿ ಬರುತ್ತಿರುವ ವಿಷಯ ತಿಳಿಯುತ್ತಲೇ ಇವರಿಬ್ಬರೂ ಆತ್ಮಹತ್ಯೆಯೂ ಯತ್ನಿಸಿದ್ದಾರೆ ಇಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗಿದೆ. ಈ ನಡುವೆ ಬಾಲಕ ಅಪ್ರಾಪ್ತನಾಗಿರುವ ಕಾರಣ, ಶಿಕ್ಷಕಿ ವಿರುದ್ಧ ಪೊಕ್ಸೊ ಕಾಯ್ದೆಯಡಿ ದೂರು ದಾಖಲು ಮಾಡಲಾಗಿದೆ. ಸದ್ಯ ಇಬ್ಬರೂ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.