Uppinangady: ಗುಜಿರಿ ಅಂಗಡಿಯಲ್ಲಿ ಪತಿಯೊಂದಿಗೆ ಮತ್ತೊಬ್ಬಳು; ಪತ್ನಿಯಿಂದಲೇ ಬಿತ್ತು ಧರ್ಮದೇಟು!
Sunday, December 12, 2021
ಮಂಗಳೂರು: ಪತಿಯೊಂದಿಗೆ ಗುಜಿರಿ ಅಂಗಡಿಯಲ್ಲಿ ಮತ್ತೊಬ್ಬಳು ಇದ್ದದ್ದನ್ನು ಕಂಡು ಕೆಂಡಾಮಂಡಲವಾದ ಪತ್ನಿಯೋರ್ವಳು ಆಕೆಗೆ ಕಣ್ಣಿಗೆ ಖಾರದ ಪುಡಿ ಹಾಕಿ ಥಳಿಸಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಪತಿಯಿಂದಲೇ ಪತ್ನಿಯ ವಿರುದ್ಧ ದೂರು ದಾಖಲಾಗಿದೆ.
ಈ ಘಟನೆಯು ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ಮಠ ಎಂಬಲ್ಲಿ 2021ರ ನವೆಂಬರ್ 21ರಂದು ಮಧ್ಯಾಹ್ನ 12ರ ಸುಮಾರಿಗೆ ನಡೆದಿದೆ. ಆದರೆ ಇಂದು ಈ ಬಗ್ಗೆ ಪತಿಯೇ ಪತ್ನಿ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಕಾನೂನಿನ ಅರಿವು ಇರದ ಪರಿಣಾಮ ಪ್ರಕರಣವು ಒಂದು ತಿಂಗಳು ತಡವಾಗಿ ಬೆಳಕಿಗೆ ಬಂದಿದೆ.
ಬಂಟ್ವಾಳ ತಾಲೂಕು, ಕಾವಳಕಟ್ಟೆಯ ಬೆಂಗತ್ತೋಡಿ ನಿವಾಸಿ ಅಬ್ದುಲ್ ರಹ್ಮಾನ್ ಎಂಬವರು ತಮ್ಮ ಗುಜಿರಿ ಅಂಗಡಿಯಲ್ಲಿ ತನ್ನ ಪರಿಚಯದ ಶಹನಾಜ್ ಎಂಬವರದಿಗೆ ಮಾತನಾಡುತ್ತಿದ್ದರು. ಈ ಸಂದರ್ಭ ಏಕಾಏಕಿ ಅಬ್ದುಲ್ ರಹ್ಮಾನ್ ಪತ್ನಿ ಹಸೀನಾ ಹಾಗೂ ಚಾಲಕ ಅಫ್ರೀದ್ ಎಂಬವರು ಅಲ್ಲಿಗೆ ಬಂದಿದ್ದಾರೆ. ತಕ್ಷಣ ಅವರು ಶಹನಾಜ್ ರನ್ನು ಉದ್ದೇಶಿಸಿ ಮುಸ್ಲಿಂ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ನನ್ನ ಪತಿಯೊಂದಿಗೆ ಇಲ್ಲಿ ನಿನಗೇನು ಕೆಲಸ' ಎಂದು ಬೈದು ದೊಣ್ಣೆ, ಕೈಗಳಿಂದ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಕಣ್ಣಿಗೆ ಖಾರದ ಹುಡಿ ಹಾಕಿ ಚೆನ್ನಾಗಿ ಥಳಿಸಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ.
ಹಸೀನಾಳೊಂದಿಗೆ ಬಂದಿದ್ದ ಚಾಲಕ ಅಫ್ರೀದ್ ಅಲ್ಲಿಯೇ ಇದ್ದ ಪ್ಲಾಸ್ಟಿಕ್ ಪೈಪ್ ನಿಂದ ಶಹನಾಜ್ ರಿಗೆ ಹೊಡೆದಿದ್ದಾನೆ. ಅಲ್ಲದೆ ಆತ ಶಹನಾಜ್ ರನ್ನು ಉದ್ದೇಶಿಸಿ 'ಇನ್ನು ಮುಂದಕ್ಕೆ ನೀನು ಇಲ್ಲಿಗೆ ಬಂದಲ್ಲಿ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ' ಎಂದು ಜೀವ ಬೆದರಿಕೆ ಒಡ್ಡಿದ್ದಾನೆ ಎನ್ನಲಾಗಿದೆ. ಆರೋಪಿಗಳು ಎಸಗಿರುವ ಸಂಪೂರ್ಣ ಕೃತ್ಯವನ್ನು ಅಲ್ಲಿಯೇ ಇದ್ದ ಯಾರೋ ವೀಡಿಯೋ ಚಿತ್ರೀಕರಿಸಿದ್ದಾರೆ.
ಈ ಬಗ್ಗೆ ಕಾನೂನಿನ ಅರಿವು ಇಲ್ಲದೇ ಇದ್ದುದರಿಂದ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಆದ್ದರಿಂದ ಶಹನಾಜ್ ಮೇಲೆ ಹಲ್ಲೆ ನಡೆಸಿರುವ ಹಸೀನಾ ಹಾಗೂ ಅಫ್ರೀದ್ ಎಂಬವರ ಮೇಲೆ ಇದೀಗ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಹಸೀನಾ ಪತಿಯಿಂದಲೇ ದೂರು ದಾಖಲಾಗಿದೆ.