
ವರ ಮಾಲೆ ಹಾಕುತ್ತಿದ್ದಂತೆ ಮಂಟಪಕ್ಕೆ ನುಗ್ಗಿ ವಧುವಿನ ಹಣೆಗೆ ಸಿಂಧೂರವಿಟ್ಟ ಪ್ರೇಮಿ: ವೀಡಿಯೋ ವೈರಲ್
Tuesday, December 7, 2021
ಲಖನೌ: ವರ ವಧುವಿನ ಕೊರಳಿಗೆ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರದಲ್ಲಿ ಪ್ರೇಮಿ ಎಂಟ್ರಿಯಾಗಿ ಮದುವೆಯನ್ನು ನಿಲ್ಲಿಸುವ ದೃಶ್ಯಗಳನ್ನು ಸಿನಿನಾಗಳಲ್ಲಿ ನೋಡಿರುತ್ತೇವೆ. ಅಂಥಹದ್ದೇ ಘಟನೆಯೊಂದು ಉತ್ತರಪ್ರದೇಶದ ಗೋರಖ್‍ಪುರದಲ್ಲಿ ನಡೆದಿದೆ.
ವಿವಾಹ ಮಂಟಪದೊಳಗೆ ನುಗ್ಗಿದ ಪ್ರಿಯಕರನೋರ್ವನು ತನ್ನ ಪ್ರೇಯಸಿಗೆ ಸಿಂಧೂರವಿಟ್ಟಿದ್ದಾನೆ. ವರ ವಧುವಿಗೆ ಮಾಲೆ ಹಾಕುತ್ತಿದ್ದಂತೆಯೇ ಓಡೋಡಿ ಬಂದಿರುವ ಪ್ರಿಯಕರ ತನ್ನ ಜೇಬಿನಲ್ಲಿದ್ದ ಸಿಂಧೂರವನ್ನು ತೆಗೆದು ಆಕೆಯ ಹಣೆಗಿಟ್ಟು ಮದುವೆ ಕಾರ್ಯ ಮುಗಿಸಿದ್ದಾನೆ. ಮುಹೂರ್ತಕ್ಕೆ ಸರಿಯಾಗಿ ಪ್ರೇಮಿಯೇ ವಧುವಿಗೆ ಸಿಂಧೂರವಿಟ್ಟಿರುವ ವೀಡಿಯೋ ಇದೀಗ ವೈರಲ್ ಆಗಿದ್ದು, ಜನರು ದಂಗುಬಡಿದಿದ್ದಾರೆ.
ಅಸಲಿಗೆ ಆಗಿದ್ದೇನೆಂದರೆ ಈ ಮದುವೆಯಾಗುತ್ತಿರುವ ಯುವತಿ ಹಾಗೂ ಸಿಂಧೂರವಿಟ್ಟ ಯುವಕ ಪ್ರೇಮಿಗಳಾಗಿದ್ದರು. ಇವರಿಬ್ಬರ ಪ್ರೇಮದ ಬಗ್ಗೆ ಮನೆಯವರಿಗೆ ಇಷ್ಟವಿರಲಿಲ್ಲ. ಅದಕ್ಕಾಗಿ ಆತ ನೌಕರಿಗಾಗಿ ಬೇರೆ ಊರಿಗೆ ಹೋಗಿರುವ ಸಂದರ್ಭವನ್ನೇ ಕಾದು, ಯುವತಿಯನ್ನು ಬೇರೆಯವರಿಗೆ ಕೊಟ್ಟು ಮದುವೆ ಮಾಡಲು ಮನೆಯವರು ಸಿದ್ಧತೆ ನಡೆಸಿದ್ದಾರೆ.
ಯುವತಿ ಬೇಡ ಎಂದರೂ ಕೇಳದೇ ಈ ಮದುವೆ ನಡೆದಿದೆ. ಆದರೆ ಯುವತಿ ವಿಚಾರವನ್ನು ಪ್ರೇಮಿಗೆ ಹೇಳಿದ್ದಾಳೆ. ಮುಹೂರ್ತಕ್ಕೆ ಸರಿಯಾಗಿ ಮದುವೆ ಮಂಟಪಕ್ಕೆ ಬಂದ ಯುವಕ ಆಕೆಗೆ ಸಿಂಧೂರವಿಟ್ಟಿದ್ದಾನೆ. ಅಲ್ಲಿದ್ದವರು ಆತನನ್ನು ತಡೆಯಲು ಯತ್ನಿಸಿದರೂ ಅದು ಸಫಲವಾಗಲಿಲ್ಲ.