ಯುವತಿಯರಿಬ್ಬರಿಂದ ನಡು ರಸ್ತೆಯಲ್ಲಿಯೇ ಜುಟ್ಟು ಹಿಡಿದು ಕಿತ್ತಾಟ: ಕಾರಣ ತಿಳಿದು ಸ್ಥಳದಲ್ಲಿದ್ದವರು ಶಾಕ್
Wednesday, December 22, 2021
ವಿಶಾಖಪಟ್ಟಣಂ: ಯುವತಿಯರಿಬ್ಬರು ಓರ್ವನಿಗಾಗಿ ನಡುರಸ್ತೆಯಲ್ಲಿಯೇ ಪರಸ್ಪರ ಜುಟ್ಟು ಹಿಡಿದುಕೊಂಡು ಕಿತ್ತಾಡಿಕೊಂಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ. ಕಾಲೇಜು ವಿದ್ಯಾರ್ಥಿಗಳಾದ ಈ ಯುವತಿಯರಿಬ್ಬರು ವಿಶಾಖಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದರು. ಆಗ ಅವರು ಇದ್ದಕ್ಕಿದ್ದಂತೆ ಒಬ್ಬರನೊಬ್ಬರು ನಿಂದನೆ ಮಾಡಲು ಆರಂಭಿಸಿದ್ದಾರೆ. ನೋಡು ನೋಡುತ್ತಿದ್ದಂತೆ ಇಬ್ಬರ ನಡುವೆ ಬೈಗುಳದ ಕೂಗಾಟ ಜೋರಾಗಿದೆ.
ಆಗ ಅಲ್ಲಿದ್ದವರೆಲ್ಲಾ ಏನಾಗುತ್ತಿದೆ ಎಂದು ನೋಡುತ್ತಿದ್ದಂತೆ ಇಬ್ಬರು ಯುವತಿಯರು ಪರಸ್ಪರ ಜುಟ್ಟು ಹಿಡಿದು ಕಿತ್ತಾಡಿಕೊಳ್ಳಲು ಆರಂಭಿಸಿದ್ದಾರೆ. ಆಗ ಇವರಿಬ್ಬರ ಪಕ್ಕದಲ್ಲಿ ಓರ್ವ ಯುವಕನು ಕೂಡ ನಿಂತಿದ್ದನು. ಯಾವ ವಿಚಾರಕ್ಕೆ ಇವರಿಬ್ಬರು ಜಗಳವಾಡುತ್ತಿದ್ದಾರೆ ಎಂದು ಅರಿವಾದಾಗ ಅಲ್ಲಿದ್ದವರೆಲ್ಲ ಒಂದು ಕ್ಷಣ ದಂಗಾಗಿದ್ದಾರೆ.
ಈ ಯುವತಿಯರಿಬ್ಬರೂ ಓರ್ವ ಯುವಕನನ್ನೇ ಪ್ರೀತಿಸುತ್ತಿದ್ದರು. ಅದೇ ವಿಚಾರಕ್ಕೆ ಇವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಈ ವೇಳೆ ಯುವಕನು ಕೂಡ ಅಲ್ಲಿಯೇ ಇದ್ದ. ಈ ಬಗ್ಗೆ ಮಾಹಿತಿ ತಿಳಿದು ಅಲ್ಲಿಗೆ ಬಂದ ಪೊಲೀಸರು ಇಬ್ಬರು ಯುವತಿಯರು ಮತ್ತು ಯುವಕನನ್ನು ಕರೆದುಕೊಂಡು ಹೋಗಿ ಸಮಾಲೋಚನೆ ನೀಡಿ ಕಳುಹಿಸಿದ್ದಾರೆ.
ಇನ್ನು ಸ್ಥಳೀಯರು ಯುವತಿಯರಿಬ್ಬರ ಜಗಳವನ್ನು ಮೊಬೈಲ್ನಲ್ಲಿ ಸೆರೆಹಿಡಿದು ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವೀಡಿಯೋವೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.