-->
ಪತಿಯೊಂದಿಗೆ ಹೋಗೋಲ್ಲ ಎಂದಾಕೆಗೆ ಬೂಟುಗಾಲಲ್ಲಿ ಒದ್ದ ಪೊಲೀಸರು: ವೈರಲ್ ಆಯ್ತು ವೀಡಿಯೋ

ಪತಿಯೊಂದಿಗೆ ಹೋಗೋಲ್ಲ ಎಂದಾಕೆಗೆ ಬೂಟುಗಾಲಲ್ಲಿ ಒದ್ದ ಪೊಲೀಸರು: ವೈರಲ್ ಆಯ್ತು ವೀಡಿಯೋ

ಚಿಕ್ಕಬಳ್ಳಾಪುರ: ಪತಿಯ ಜೊತೆಗೆ ಜಗಳ ಮಾಡಿಕೊಂಡು ಸಂಬಂಧಿ ವ್ಯಕ್ತಿಯೊಂದಿಗೆ ಪರಾರಿಯಾಗಿದ್ದ ಮಹಿಳೆಯನ್ನು ಪತ್ತೆ ಹಚ್ಚಿರುವ ದಿಬ್ಬೂರಹಳ್ಳಿ ಪೊಲೀಸರು ಆಕೆಯನ್ನು ಠಾಣೆಗೆ ಕರೆತಂದು ಥಳಿಸಿರುವುದಲ್ಲದೆ ಬೂಟುಗಾಲಿನಿಂದ ಒದೆಯುತ್ತಿರುವ ವೀಡಿಯೋವೊಂದು ಗುರುವಾರ ವೈರಲ್​ ಆಗಿದೆ. 

ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಪಿಎಸ್​ಐ ಪಾಪಣ್ಣ ನೇತೃತ್ವದಲ್ಲೇ ಈ ದೌರ್ಜನ್ಯ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಮಹಿಳಾ ಸಿಬ್ಬಂದಿಯೂ ಇಲ್ಲದ ಠಾಣೆಯಲ್ಲಿ ಮನಬಂದಂತೆ ಮಹಿಳೆಯೋರ್ವರನ್ನು ಥಳಿಸಿರುವ ಖಾಕಿಯ ಗೂಂಡಾವರ್ತನೆಗೆ ಜಿಲ್ಲೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ. 

ಹಲ್ಲೆಗೊಳಗಾದ ಮಹಿಳೆಯು ಸ್ಥಳೀಯ ಇಟ್ಟಿಗೆ ಕಾರ್ಖಾನೆಯಲ್ಲಿ ಪತಿಯೊಂದಿಗೆ ನೌಕರಿ ಮಾಡುತ್ತಿದ್ದಳು. ಆದರೆ, ಪತಿ ಮದ್ಯಸೇವನೆ ಮಾಡಿ ಬಂದು ದಿನನಿತ್ಯವೂ ಜಗಳ ಮಾಡುತ್ತಿದ್ದ. ಇದರಿಂದ ಬೇಸತ್ತ ಮಹಿಳೆ ಸಂಬಂಧಿಯೊಂದಿಗೆ ಓಡಿ ಹೋಗಿದ್ದಾಳೆ. 

ಇದರಿಂದ ಕಾರ್ಖಾನೆ ಮಾಲಕ ಡಿ.ಜಿ.ರಾಮಚಂದ್ರ ಮೌಖಿಕವಾಗಿ ಪೊಲೀಸ್ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಮಹಿಳೆಯನ್ನು ಹಾಗೂ ಆಕೆಯ ಜತೆಯಲ್ಲಿದ್ದ ಸಂಬಂಧಿಯನ್ನು ಕರೆದುಕೊಂಡು ಬಂದು ಮನಬಂದಂತೆ ಥಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಪತಿಯ ಜೊತೆಗೆ ಹೋಗಲು ಮಹಿಳೆ ನಿರಾಕರಿಸಿರುವುದೇ ಈ ಥಳಿತಕ್ಕೆ ಕಾರಣ ಎನ್ನಲಾಗಿದೆ.

ಮಹಿಳೆಗೆ ಪೊಲೀಸರು ಥಳಿಸುವ ವೀಡಿಯೋ ವೈರಲ್​ ಆಗುತ್ತಿದ್ದಂತೆ ಮಾನವ ಹಕ್ಕುಗಳು ಮತ್ತು ಮಾಧ್ಯಮ ಸಂಘಟನೆ ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕಚೇರಿಗೆ ದೂರು ನೀಡಿದೆ. ಮಹಿಳೆ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಈ ಬಗ್ಗೆ ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕದು ಎಂದು ಸಂಘಟನೆ ಒತ್ತಾಯಿಸಿದೆ. 

Ads on article

Advertise in articles 1

advertising articles 2

Advertise under the article