
ತೆಲುಗು ಯೂಟ್ಯೂಬರ್ಸ್ ಶನ್ನು - ದೀಪ್ತಿ ವಿವಾಹಕ್ಕೆ ಈ ಷರತ್ತುಗಳು ಈಡೇರಬೇಕು: ಶನ್ನು ಪೋಷಕರು
Wednesday, December 8, 2021
ಹೈದರಾಬಾದ್: ಪ್ರಖ್ಯಾತ ಯೂಟ್ಯೂಬರ್ ಹಾಗೂ ತೆಲುಗು ಬಿಗ್ ಬಾಸ್ ಸ್ಪರ್ಧಿ ಷಣ್ಮುಖ ಜಸ್ವಂತ್ ಅಲಿಯಾಸ್ ಶನ್ನು ತೆಲುಗು ಮಂದಿಗೆ ಬಹಳ ಪರಿಚಿತ ಹೆಸರು. ತೆಲುಗಿನ ಪ್ರಖ್ಯಾತ ಯೂಟ್ಯೂಬರ್ 4 ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿರುವ ತೆಲುಗಿನ ಮೊದಲ ಯೂಟ್ಯೂಬರ್ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ.
ಪ್ರಸ್ತುತ ಅವರು ತೆಲುಗು ಬಿಗ್ಬಾಸ್ ಸಿಸನ್ 5ರ ಸ್ಪರ್ಧಿಯು ಆಗಿದ್ದಾರೆ. ತಮ್ಮ ಕಿರುಚಿತ್ರ, ಡ್ಯಾನ್ಸ್ ವೀಡಿಯೋಗಳಿಂದ ಶನ್ನು ಬಹಳ ಪ್ರಸಿದ್ಧಿ ಪಡೆದಿದ್ದಾರೆ. ಅದರಲ್ಲೂ ಅವರ ಅರೇ ಎಂಟ್ರಾ ಇಧಿ… ಡೈಲಾಗ್ ಅಂತೂ ಸಿಕ್ಕಾಪಟ್ಟೆ ಫೇಮಸ್. ಬಿಗ್ಬಾಸ್ ವೇದಿಕೆ ಮೇಲೆ ಸ್ವತಃ ನಾಗಾರ್ಜುನ್ ಅವರೇ ಆ ಡೈಲಾಗ್ ಹೇಳಿದ್ದರು.
ಇನ್ನು ಶನ್ನು ಪ್ರೀತಿಯಲ್ಲಿ ಬಿದ್ದಿರುವ ವಿಚಾರ ಜಗಜ್ಜಾಹಿರವಾಗಿದ್ದು, ಅದನ್ನು ಬಿಗ್ಬಾಸ್ ವೇದಿಕೆಯಲ್ಲೂ ಅವರು ಹಂಚಿಕೊಂಡಿದ್ದರು. ಅವರ ಪ್ರೇಯಸಿ ಎನಿಸಿಕೊಂಡ ದೀಪ್ತಿ ಕೂಡಾ ಇದನ್ನು ಹೇಳಿಕೊಂಡಿದ್ದಾರೆ. ಬಿಗ್ಬಾಸ್ನಲ್ಲಿ ಶನ್ನು ಗೆಲುವಿಗಾಗಿ ದೀಪ್ತಿ ಪ್ರಚಾರ ಕೂಡ ಮಾಡುತ್ತಿದ್ದಾರೆ.
ಇತ್ತೀಚೆಗೆ ಮಾಧ್ಯಮವೊಂದರ ಸಂದರ್ಶನದಲ್ಲಿ ಶನ್ನು ಹೆತ್ತವರು ಷಣ್ಮುಖ ಹಾಗೂ ದೀಪ್ತಿ ವಿವಾಹದ ಬಗ್ಗೆ ಆಸಕ್ತಿದಾಯಕ ವಿಚಾರವನ್ನು ಹೇಳಿದ್ದಾರೆ. "ಅವರಿಬ್ಬರ ಪ್ರೀತಿ ಬಗ್ಗೆ ಮೊದಲು ನಮಗೆ ಗೊತ್ತಿರಲಿಲ್ಲ, ಟಿವಿಯಲ್ಲಿ ನೋಡಿದ ಬಳಿಕವಷ್ಟೇ ಗೊತ್ತಾಗಿದೆ" ದೀಪ್ತಿಯನ್ನು ಪ್ರೀತಿಸುತ್ತಿರುವ ಬಗ್ಗೆ ಶನ್ನು ನಮಗೆ ಹೇಳಿರಲಿಲ್ಲ. ಇಬ್ಬರು ಯೂಟ್ಯೂಬ್ ಮೂಲಕ ಪ್ರಖ್ಯಾತಿ ಪಡೆದಿದ್ದಾರೆ. ಇಬ್ಬರು ಒಳ್ಳೆಯ ಗೆಳೆಯರು ಎಂದು ಭಾವಿಸಿದ್ದೆವು. ಆದರೆ, ಇಬ್ಬರು ಪ್ರೀತಿಸುತ್ತಿದ್ದಾರೆ ಎಂಬುದು ಟಿವಿಯಲ್ಯ ಬಂದ ಬಳಿಕವೇ ಗೊತ್ತಾಗಿದೆ" ಎಂದಿದ್ದಾರೆ.
ಆ ಬಳಿಕ ಶನ್ನು ನಮಗೆ ಎಲ್ಲವನ್ನು ತಿಳಿಸಿದ್ದಾನೆ. ನಮಗೂ ಆಕೆ ಇಷ್ಟವಾಗಿದ್ದಾಳೆ. ಆದರೆ, ದೀಪ್ತಿ ಕುಟುಂಬಕ್ಕೆ ಶನ್ನು ಇಷ್ಟವಾಗೋದು ಅಷ್ಟೇ ಮುಖ್ಯ. ದೀಪ್ತಿ ಕುಟುಂಬಕ್ಕೆ ವಿರುದ್ಧವಾಗಿ ವಿವಾಹ ಮಾಡಲು ನಮಗೆ ಆಗುವುದಿಲ್ಲ. ದೀಪ್ತಿ ಪಾಲಕರು ಏನು ಹೇಳುತ್ತಾರೆ ಎಂಬುದು ಈಗಲು ಸಹ ನಮಗೆ ಗೊತ್ತಿಲ್ಲ. ಆದರೆ, ಇಬ್ಬರ ಮದುವೆಗೆ ತುಂಬಾ ಸಮಯವಿದೆ. ಶನ್ನು ಹಿರಿಯ ಸಹೋದರ ಇನ್ನೂ ಮದುವೆ ಆಗಿಲ್ಲ. ಮೊದಲು ಆತನ ಮದುವೆ ಆಗಬೇಕು. ಶನ್ನು ಮದುವೆಗೆ ಇನ್ನು ಮೂರರಿಂದ ನಾಲ್ಕು ವರ್ಷಗಳಾಗುತ್ತವೆ" ಎಂದು ಹೇಳಿದ್ದಾರೆ.
ಇನ್ನು ಶನ್ನು ಹಾಗೂ ದೀಪ್ತಿ ಸಾಮಾಜಿಕ ಜಾಲತಾಣದಲ್ಲಿ ಪ್ರಖ್ಯಾತ ಜೋಡಿಯಾಗಿದ್ದಾರೆ. ಅನೇಕ ಡ್ಯಾನ್ಸ್ ವಿಡಿಯೋಗಳನ್ನು ಒಟ್ಟಿಗೆ ಮಾಡಿದ್ದಾರೆ. ಅನೇಕ ಕಿರುಚಿತ್ರಗಳಲ್ಲೂ ಒಟ್ಟಿಗೆ ನಟಿಸಿದ್ದಾರೆ. ಬಿಗ್ಬಾಸ್ 5ನೇ ಆವೃತ್ತಿಗೆ ಶನ್ನು ಹೋದಾಗ ದೀಪ್ತಿ ತಮ್ಮ ಇನ್ಸ್ಟಾಗ್ರಾಂನಲ್ಲಿ "ಟಿವಿಯಲ್ಲಿ ಪ್ರತಿದಿನ ನಿನ್ನನ್ನು ನೋಡಲು ಮತ್ತು ಹೆಮ್ಮೆ ಪಡಲು ಕಾಯಲು ಸಾಧ್ಯವಿಲ್ಲ. ನಾನು ನಿನ್ನನ್ನು ಪ್ರೀತಿಸುತ್ತೇನೆ ಮತ್ತು ನಿನಗಾಗಿ ಇರುತ್ತೇನೆಂದು" ಭಾವನಾತ್ಮಕವಾಗಿ ಬರೆದುಕೊಂಡಿದ್ದರು. ದೀಪ್ತಿ ಸಿನಿಮಾದಲ್ಲೂ ನಟಿಸಿದ್ದಾರೆ.