
ಸಚಿವ ಎಸ್.ಟಿ.ಸೋಮಶೇಖರ್ ಅಶ್ಲೀಲ ವೀಡಿಯೋ ಕಳುಹಿಸಿ 1 ಕೋಟಿ ರೂ.ಗೆ ಬೇಡಿಕೆ: ಶಾಸಕರೋರ್ವರ ಪುತ್ರಿ, ಖ್ಯಾತ ಜ್ಯೋತಿಷಿ ಪುತ್ರ ಕೈವಾಡ?
Sunday, January 9, 2022
ಬೆಂಗಳೂರು: ರಾಜ್ಯ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಪುತ್ರನ ಅಶ್ಲೀಲ ವೀಡಿಯೋ ವಾಟ್ಸ್ಆ್ಯಪ್ ಮಾಡಿ 1 ಕೋಟಿ ರೂ. ಹಣಕ್ಕೆ ಡಿಮಾಂಡ್ ಮಾಡಿ ಬ್ಲ್ಯಾಕ್‌ಮೇಲ್ ಮಾಡಿರುವ ಘಟನೆ ನಡೆದಿದೆ.
ಸೋಮಶೇಖರ್ ಪುತ್ರ ನಿಶಾಂತ್ ಈ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಚಿವ ಎಸ್.ಟಿ.ಸೋಮಶೇಖರ್ ಆಪ್ತ ಸಹಾಯಕನ ಮೊಬೈಲ್ ವಾಟ್ಸ್‌ಆ್ಯಪ್ ಗೆ ವಿದೇಶದ ಮೊಬೈಲ್ ಸಂಖ್ಯೆಯಿಂದ ಸಂದೇಶವೊಂದು ಬಂದಿತ್ತು.
ಅದರಲ್ಲಿ ‘ಸಚಿವ ಸೋಮಶೇಖರ್ ಪುತ್ರ ನಿಶಾಂತ್‌ನ ಅಶ್ಲೀಲ ವಿಡಿಯೋ ನಮ್ಮ ಬಳಿ ಇದೆ. 1 ಕೋಟಿ ರೂ. ನೀಡದಿದ್ದರೆ ಅದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತೇವೆ’ ಎಂದು ಹೇಳಲಾಗಿತ್ತು. ಈ ವೀಡಿಯೋ ನೋಡಿರುವ ನಿಶಾಂತ್, 'ಇದು ಫೇಕ್ ವೀಡಿಯೋ ಆಗಿದ್ದು, ನಾನು ರಾಜಕೀಯವಾಗಿ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದೇನೆ. ಪಕ್ಷ ಸಂಘಟನೆಯಲ್ಲಿ ಕೆಲಸವನ್ನು ಮಾಡುತ್ತಿದ್ದೇನೆ. ನನ್ನ ಹಾಗೂ ನನ್ನ ತಂದೆಯ ರಾಜಕೀಯ ಬೆಳವಣಿಗೆ ಸಹಿಸದೆ ಈ ಕೃತ್ಯ ಎಸಗಲಾಗಿದೆ' ಎಂದು ನಿಶಾಂತ್ ಹೇಳಿ ಸೈಬರ್ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸೋಮಶೇಖರ್ ಅವರು, 'ನನ್ನ ಪುತ್ರ ಊಟ ಮಾಡುವ ಫೋಟೊಗಳನ್ನು ಪಡೆದು ವೀಡಿಯೋ ಮಾಡಲಾಗಿದೆ. ಇದನ್ನು ಮಾರ್ಫ್ ಮಾಡಿರುವ ಸಾಧ್ಯತೆಯಿದೆ. ಹೀಗಾಗಿ ವೀಡಿಯೋ ಸಹಿತ ದೂರು ನೀಡಿದ್ದೇವೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯ ಬಳಿಕ ಅಸಲಿ ಸತ್ಯ ಗೊತ್ತಾಗಲಿದೆ ಎಂದಿದ್ದಾರೆ.
'ಅಲ್ಲದೆ ತನ್ನನ್ನು ನೇರವಾಗಿ ಟಾರ್ಗೆಟ್ ಮಾಡಿ ನಕಲಿ ವೀಡಿಯೋ ಮಾಡಲಾಗಿದೆ. ಯಾರೋ ಮಹಿಳೆಯ ಜತೆಯಲ್ಲಿರುವಂತೆ ಅಶ್ಲೀಲವಾದ ನಕಲಿ ದೃಶ್ಯಾವಳಿ ಮತ್ತು ಫೋಟೋಗಳನ್ನು ಸೃಷ್ಟಿಸಿ ಹಣಕ್ಕೆ ಬೇಡಿಕೆ ಇರಿಸಲಾಗಿದೆ' ಎಂದು ನಿಶಾಂತ್ ಹೇಳಿದ್ದಾರೆ.
ನಿಶಾಂತ್ ಅವರು ನೀಡಿರುವ ದೂರಿನನ್ವಯ ತನಿಖೆ ಕೈಗೊಂಡ ಪೊಲೀಸರು ಸದ್ಯ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಸೋಮಶೇಖರ್ ಮಾಜಿ ಗನ್ ಮ್ಯಾನ್ ಒಬ್ಬನಾಗಿದ್ದಾನೆ. ಖ್ಯಾತ ಜ್ಯೋತಿಷಿಯೊಬ್ಬರ ಪುತ್ರ ರಾಹುಲ್ ಭಟ್ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ. ಮಾತ್ರವಲ್ಲದೇ ಈ ಬ್ಲ್ಯಾಕ್‌ಮೇಲ್ ಹಿಂದೆ ವಿಜಯಪುರದ ಖ್ಯಾತ ಶಾಸಕರೊಬ್ಬರ ಪುತ್ರಿಯೂ ಇರುವುದಾಗಿ ಪೊಲೀಸರಿಗೆ ಸುಳಿವು ದೊರಕಿದೆ. ಈಕೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.