
ಹೊಸನಗರ: 10 ರೂ. ಕೋಳಿ ಮರಿಗೆ ಬಸ್ ಪ್ರಯಾಣ ದರ 52 ರೂ.!
Sunday, January 2, 2022
ಹೊಸನಗರ: ಹತ್ತು ರೂ. ಬೆಲೆಯ ಕೋಳಿ ಮರಿಗೆ 52 ರೂ. ಟಿಕೆಟ್ ದರ ನೀಡಿ ಬಸ್ ಪ್ರಯಾಣ ಮಾಡಿದ ಪ್ರಸಂಗವೊಂದು ಬೈಂದೂರಿನಲ್ಲಿ ನಡೆದಿದೆ.
ಅಲೆಮಾರಿ ಕುಟುಂಬವೊಂದು ಬೈಂದೂರಿನಿಂದ ಶಿರೂರಿಗೆ ಪ್ರಯಾಣ ಬೆಳೆಸಲು ಸರ್ಕಾರಿ ಬಸ್ಸು ಹತ್ತಿದೆ. ಬಸ್ ಕಂಡಕ್ಟರ್ ಬಂದು ಟಿಕೆಟ್ ಕೊಡಲು ಎಲ್ಲಿಗೆ ಎಂದು ಕೇಳಿದ್ದಾನೆ. 'ಶಿರೂರು ಹೋಗಬೇಕೆಂದು' ಮೂರು ಟಿಕೆಟ್ ಕೊಡಿ ಅಂದಾಗ ಪುಟ್ಟ ಚೀಲದಿಂದ ಚಿಂವ್ ಚಿಂವ್ ಸ್ವರ ಕೇಳಿದೆ. ಅದನ್ನು ಆಲಿಸಿದ ಕಂಡಕ್ಟರ್ ಏನದು ಎಂದು ಪ್ರಶ್ನಿಸಿದ. 'ಅದು ಒಂದು ಕೋಳಿ ಮರೀರಿ..' ಎಂಬ ಪ್ರತಿಕ್ರಿಯೆ ಬಂದಿದೆ.
ತಕ್ಷಣ ಕಂಡಕ್ಟರ್ ಅದಕ್ಕೂ ಟಿಕೆಟ್ ಮಾಡಬೇಕು. ರೂಲ್ಸ್ ಇದೆ ಎಂದು ಅರ್ಧ ಚಾರ್ಜ್ ಮಾಡಿ, ಬರೋಬ್ಬರಿ 52 ರೂ. ದರದ ಟಿಕೆಟ್ ಕೊಟ್ಟಿದ್ದಾನೆ. ಮೂವರು ಮುಖಮುಖ ನೋಡಿಕೊಂಡ ಬೇರೆದಾರಿ ಕಾಣದೆ ಟಿಕೆಟ್ ತಗೆದುಕೊಂಡಿದ್ದಾರೆ.
ಶಿರಸಿಯ ಸಿದ್ದಾಪುರದಿಂದ ಬಂದ ಆ ಕುಟುಂಬ 10 ರೂ. ನೀಡಿ ಕೋಳಿ ಮರಿಯೊಂದನ್ನು ತಂದಿದ್ದರು. ಇದೀಗ ಬಸ್ಸಿನ ಟಿಕೆಟ್ ದರ ಕೋಳಿ ಮರಿಯ ದರಕ್ಕಿಂತ ನಾಲ್ಕು ಪಟ್ಟು ಹೆಚ್ಚಿದೆ ಎಂಬ ಗೊಣಗಾಟ ಕೇಳಿ ಬಂದಿದೆ. ಈ ಇಡೀ ಪ್ರಸಂಗ ಬಸ್ಸಿನಲ್ಲಿದ್ದವರ ಕುತೂಹಲ ಮತ್ತು ಚರ್ಚೆಗೆ ಗ್ರಾಸವಾಗಿದೆ.