
ಬ್ರೆಜಿಲ್: ದೋಣಿಗಳ ಮೇಲೆ ಬಿತ್ತು ಬೃಹತ್ ಬಂಡೆ; 10 ಮಂದಿ ದುರ್ಮರಣ
Monday, January 10, 2022
ಬ್ರಜಿಲಿಯಾ: ದಕ್ಷಿಣ ಅಮೆರಿಕಾ ದೇಶದ ಬ್ರೆಜಿಲ್ ನ ಸುಲ್ ಮಿನಾಸ್ ಎಂಬಲ್ಲಿನ ಜಲಪಾತದ ಕೆಳಗೆ ಮೋಟಾರು ಬೋಟ್ ಗಳ ಮೇಲೆಯೇ ಕಲ್ಲಿನ ಗೋಡೆಯೊಂದು ಕುಸಿದ ಪರಿಣಾಮ ಕನಿಷ್ಠ 10 ಮಂದಿ ಮೃತಪಟ್ಟ ದಾರುಣ ಘಟನೆಯೊಂದು ಶನಿವಾರ ನಡೆದಿದೆ. ಘಟನೆಯಲ್ಲಿ 30ಕ್ಕಿಂತ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಮಿನಾಸ್ ಗೆರೈಸ್ ರಾಜ್ಯದ ಜನಪ್ರಿಯ ಪ್ರವಾಸಿ ತಾಣ ಕ್ಯಾಪಿಟೋಲಿಯೊ ಕಣಿವೆಯಲ್ಲಿ ಈ ದುರಂತ ನಡೆದಿದೆ. ಬಂಡೆಯ ಗೋಡೆಯೊಂದು ಮುರಿದು ಎರಡು ದೋಣಿಗಳ ಮೇಲೆ ಅಪ್ಪಳಿಸಿರುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಮುಳುಗು ತಜ್ಞರು ರವಿವಾರ ಸರೋವರದಿಂದ ಮತ್ತೆ ಮೂರು ಮೃತದೇಹಗಳನ್ನು ಹೊರತೆಗೆದಿದ್ದಾರೆ. ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಲವರ ಮೂಳೆ ಮುರಿತವಾಗಿದ್ದು, ತಲೆ ಹಾಗೂ ಮುಖದ ಮೇಲೆ ಗಾಯಗೊಂಡ ಓರ್ವ ವ್ಯಕ್ತಿ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಕನಿಷ್ಠ 23 ಮಂದಿಗೆ ಸಣ್ಣಪುಟ್ಟ ಗಾಯಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.