ಅವಮಾನ ಮಾಡಿದ ಕಾರು ಶೋರೂಂ ಸಿಬ್ಬಂದಿ: ಅರ್ಧಗಂಟೆಯೊಳಗೆ 10 ಲಕ್ಷ ರೂ. ತಂದ ರೈತ
Sunday, January 23, 2022
ತುಮಕೂರು: ಕಾರು ಖರೀದಿಗೆ ಬಂದಿರುವ ರೈತನೋರ್ವನಿಗೆ ಶೋರೂಂ ಸಿಬ್ಬಂದಿ ಅವಮಾನ ಮಾಡಿದ್ದಾರೆನ್ನುವ ಘಟನೆಯೊಂದು ಭಾರೀ ಸುದ್ದಿಯಾಗಿದೆ. ತುಮಕೂರಿನ ರಾಮನಪಾಳ್ಯದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಕೆಂಪೇಗೌಡ ಎನ್ನುವ ಯುವ ರೈತನಿಗೆ ಅವಮಾನ ಮಾಡಲಾಗಿದೆ ಎನ್ನಲಾಗಿದೆ.
ಬೋಲೆರೋ ಗೂಡ್ಸ್ ವಾಹನ ಖರೀದಿಸಲು ಶೋರೂಂಗೆ ಹೆಬ್ಬೂರು ಹೋಬಳಿಯ ರಾಮನಪಾಳ್ಯ ನಿವಾಸಿ ಕೆಂಪೇಗೌಡ ಎಂಬವರು ಜ.4ರಂದು ಬಂದಿದ್ದರು. ಅವರ ವೇಷಭೂಷಣ ನೋಡಿ ಶೋರೂಂ ಸಿಬ್ಬಂದಿ ಅವಮಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ. '10 ರೂ. ದುಡ್ಡು ಕೊಡುವ ಯೋಗ್ಯತೆ ಇಲ್ಲ' ಎಂದು ಸೇಲ್ಸ್ ಏಜೆಂಟ್ರಿಂದ ಕೆಂಪೇಗೌಡರಿಗೆ ಅವಮಾನ ಆಗಿದೆ.
ಅವಮಾನಿಸಿದ್ದನ್ನೇ ಚಾಲೆಂಜ್ ಆಗಿ ಸ್ವೀಕರಿಸಿದ ಕೆಂಪೇಗೌಡ 1 ಗಂಟೆಯೊಳಗೆ 10 ಲಕ್ಷ ರೂ. ದುಡ್ಡು ಹೊಂದಿಸಿ ವಾಹನ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಆದರೆ ಶೋರೂಂ ಸೇಲ್ಸ್ ಏಜೆಂಟ್ ಮಾತ್ರ ವಾಹನ ನೀಡದೇ, 2-3 ದಿನದಲ್ಲಿ ವಾಹನ ನೀಡುತ್ತೇವೆ ಎಂದು ಹೇಳಿದ್ದಾರೆ.
ಶೋರೂಂನಲ್ಲಿ 2 ಲಕ್ಷ ರೂ.ಹಣ ಕಟ್ಟುತ್ತೇವೆ ವಾಹನ ಕೊಡಿ ಎಂದು ಕೆಂಪೇಗೌಡ ಹೇಳಿದ್ದಾರೆ. ಆಗ ಶೋರೂಮ್ ಸಿಬ್ಬಂದಿ ಕೆಂಪೇಗೌಡ ಹಾಗೂ ಅವರ ಐದಾರು ಮಂದಿ ಸ್ನೇಹಿತರು, ಸಂಬಂಧಿಗಳನ್ನು ಕಂಡು ‘ನೀವು ತಮಾಷೆ ಮಾಡಲು ಬಂದಿದ್ದೀರಾ. ವಾಹನ ತಗೊಂಡು ಹೋಗೊದಕ್ಕೆ ಬಂದಿಲ್ಲ. ನಿಮ್ಮ ಯೋಗ್ಯತೆಗೆ 10 ರೂ. ಇಲ್ಲ, ಸುಮ್ಮನೇ ಬಂದಿದ್ದೀರಾ’ ಎಂದು ಅವಮಾನ ಮಾಡಿದ್ದರು ಎಂದು ಹೇಳಲಾಗಿದೆ.
ನಾವು 25 ನಿಮಿಷ ಸಮಯ ಕೇಳಿದ್ದೀವಿ. ಆಗಲೂ ಅವರು ಕಿಚಾಯಿಸಿದ್ದಾರೆ. ನಾವು ಹೇಳಿದ ಸಮಯಕ್ಕೆ ಹಣ ತಂದು ಕೊಟ್ಟಿದ್ದೀವಿ. ಆದರೆ ಅವರು ವಾಹನ ನೀಡಲಿಲ್ಲ. ನಾವು ರೈತರು ಅಂತ ಅವಮಾನ ಮಾಡಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ. ಆ ಬಳಿಕ ತಮಗಾದ ಅವಮಾನಕ್ಕೆ ಪ್ರತಿಯಾಗಿ ಕೆಂಪೇಗೌಡ ಅವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಆ ಬಳಿಕ ಶೋರೂಂ ಸಿಬ್ಬಂದಿ ಕ್ಷಮೆ ಯಾಚನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.