
ಟೆಂಪೊ ಚಾಲಕನಿಗೆ ಹಠಾತ್ ಅನಾರೋಗ್ಯ: 10 ಕಿಮೀ ಟೆಂಪೊ ಓಡಿಸಿದ ಮಹಿಳೆ, ವೀಡಿಯೋ ವೈರಲ್
Tuesday, January 18, 2022
ಪುಣೆ: ಟೆಂಪೋ ಟ್ರಾವೆಲರ್ ಚಾಲಕ ವಾಹನ ಚಲಾಯಿಸುತ್ತಿರುವಾಗಲೇ ಹಠಾತ್ ಅನಾರೋಗ್ಯಕ್ಕೀಡಾಗಿದ್ದ ಸಂದರ್ಭ ವಾಹನದಲ್ಲಿದ್ದ ಮಹಿಳೆಯೊಬ್ಬರು ಧೈರ್ಯದಿಂದ ಟೆಂಪೋ ಟ್ರಾವೆಲರ್ ಚಲಾಯಿಸಿ, ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ ಅಪೂರ್ವ ಘಟನೆಯೊಂದು ಪುಣೆಯ ಸಮೀಪ ನಡೆದಿದೆ.
ಇದೀಗ ಯೋಗಿತಾ ಧರ್ಮೇಂದ್ರ ಸತವ್ ಎಂಬ ಈ ಮಹಿಳೆಯು ಟೆಂಪೋ ಟ್ರಾವೆಲರ್ ರನ್ನು ಚಲಾಯಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಪುಣೆಯ ವಾಘೋಲಿಯಿಂದ 20 ಕ್ಕೂ ಅಧಿಕ ಮಹಿಳೆಯರ ತಂಡವೊಂದು ಶಿರೂರು ತಾಲೂಕಿನ ಮೊರಚಿ ಚಿಂಚೋಳಿಗೆ ಪ್ರವಾಸಕ್ಕೆ ತೆರಳಿತ್ತು. ಆದರೆ ಅಲ್ಲಿಂದ ಮರಳಿ ಬರುತ್ತಿದ್ದ ವೇಳೆ ಚಾಲಕನ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಈ ಸಂದರ್ಭ ಡ್ರೈವರ್ ಸೀಟ್ ನಲ್ಲಿ ಕುಳಿತ ಯೋಗಿತಾ, ಧೈರ್ಯದಿಂದಲೇ ಟೆಂಪೋ ಟ್ರಾವೆಲರ್ ಅನ್ನು ಚಲಾಯಿಸಿದ್ದಾರೆ. ಅಲ್ಲಿಂದ ಸುಮಾರು 10 ಕಿ.ಮೀ. ಟೆಂಪೊ ಓಡಿಸಿ ಚಾಲಕನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ ಆತನ ಪ್ರಾಣ ಉಳಿಸಿದ್ದಾರೆ.
ಬಳಿಕ ಮತ್ತೊಬ್ಬ ಚಾಲಕನನ್ನು ನೇಮಿಸಿ ಯೋಗಿತಾ ಹಾಗೂ ಜೊತೆಗಾರರು ಸುರಕ್ಷಿತವಾಗಿ ವಾಘೋಲಿಗೆ ತಲುಪಿದ್ದಾರೆ. ಘಟನೆಯ ಬಗ್ಗೆ ತಿಳಿದ ವಾಘೋಲಿ ಗ್ರಾಮದ ಮಾಜಿ ಸರಪಂಚ ಜಯಶ್ರೀ ಸತವ್ ಪಾಟೀಲ್ ಅವರು ಯೋಗಿತಾ ಸಾತವ್ ಮನೆಗೆ ತೆರಳಿ ಅಭಿನಂದನೆ ಸಲ್ಲಿಸಿದ್ದಾರೆ.