
ನಟ ಅಲ್ಲು ಅರ್ಜುನ್ ಮನೆ ಬರೋಬ್ಬರಿ 100 ಕೋಟಿ ರೂ. ಬೆಲೆಬಾಳುತ್ತಂತೆ: ಅಂಥದ್ದೇನಿದ್ದೇನಿದೆ ಈ ಮನೆಯಲ್ಲಿ?
ಹೈದರಾಬಾದ್: ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ನಟ ಅಲ್ಲು ಅರ್ಜುನ್ ಮನೆಯು ಸೌಂದರ್ಯ ಹಾಗೂ ಸರಳತೆಯ ಪ್ರತಿರೂಪವಾಗಿದೆ. ವಿಶಿಷ್ಟವಾಗಿ ಚೌಕಾಕಾರದಲ್ಲಿ ವಿನ್ಯಾಸಗೊಳಿಸಲಾಗಿರುವ ಅಲ್ಲು ಅರ್ಜುನ್ ಮನೆ ವಾಸ್ತುಶಿಲ್ಪದ ಮೇರುಶಿಲ್ಪವಾಗಿದೆ. ಆದ್ದರಿಂದ, ಅಲ್ಲು ಅಭಿಮಾನಿಗಳಿಗೆ ಅವರ ಮನೆಯನ್ನು ನೋಡಬೇಕೆಂದು ಬಯಕೆಯಾಗಿದೆಯಂತೆ.
ಅಂದ ಹಾಗೆ ಅಲ್ಲು ಅರ್ಜುನ್ ಈ ಮನೆಯ ಬೆಲೆ ಎಷ್ಟು ಎಂಬುದು ಸದ್ಯ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಇದರ ಸುದ್ದಿಯೇ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ನಟ ಅಲ್ಲು ಅರ್ಜುನ್ 2003 ರಲ್ಲಿ 'ಗಂಗೋತ್ರಿ' ಸಿನಿಮಾ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಅಂದಿನಿಂದ ಇಂದಿನವರೆಗೆ ಅವರು ಸಿನಿ ಪ್ರೇಕ್ಷಕರು ಮೆಚ್ಚಲೇ ಬೇಕಾದ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಮೂರು ನಂದಿ ಪ್ರಶಸ್ತಿಗಳು ಮತ್ತು ಐದು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿರುವ ಅಲ್ಲು ಇತ್ತೀಚೆಗೆ ಬಿಡುಗಡೆಯಾದ ‘ಪುಷ್ಪ‘ ಸಿನಿಮಾದ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ. ಹೀಗಾಗಿ, ನಟ ಅಲ್ಲು ಅರ್ಜುನ್ ಒಂದು ಸಿನಿಮಾಗೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಹೀಗಿರುವಾಗ, ಅವರ ಮನೆಯ ಬೆಲೆ ಎಷ್ಟು ಇರಬಹುದು ಎಂದರೆ ಕೋಟಿ ಗಟ್ಟಲೆ ಇರಬಹುದು ಎಂದು ಎಲ್ಲರಿಗೂ ತಿಳಿದಿರುತ್ತೆ.
ಆದರೆ, ಅಲ್ಲು ಮನೆಯ ಬೆಲೆ ಅಭಿಮಾನಿಗಳು ತಿಳಿದಿರುವಷ್ಟು, ಅಂದರೆ 30 ಅಥವಾ 40 ಕೋಟಿ ರೂ. ಅಲ್ಲ. ಬದಲಿಗೆ ಅಲ್ಲು ಅರ್ಜುನ್ ಮನೆಯ ಬೆಲೆ ಬರೋಬ್ಬರಿ 100 ಕೋಟಿ ರೂ. ಎನ್ನಲಾಗುತ್ತಿದೆ. ಹಾಗಾದರೆ, ಆ ಮನೆಯಲ್ಲಿ ಅಂತಹದ್ದು ಏನಿದೆ ಎಂದು ಕೇಳುತ್ತೀರಾ?. ಅಲ್ಲು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಫೋಟೋಗಳಲ್ಲಿ, ವಿಡಿಯೋಗಳಲ್ಲಿ ಮನೆಯನ್ನು ಎಲ್ಲರೂ ಅದನ್ನುಮನೆ ಎಂದು ಕರೆಯದೆ, ಬದಲಿಗೆ ಐಶಾರಾಮಿ ಬಂಗಲೆ ಎನ್ನಬಹುದು ಎಂದಿದ್ದಾರೆ.
ಅರ್ಜುನ್ ಅವರ ಈ ಮನೆ ಹೈದರಾಬಾದ್ನ ಜುಬಿಲಿ ಹಿಲ್ಸ್ನಲ್ಲಿದೆ. ಎರಡು ಎಕರೆಯ ವಿಶಾಲವಾದ ಜಾಗದಲ್ಲಿ ಈ ಬಂಗಲೆಯನ್ನು ಹೆಸರಾಂತ ವಾಸ್ತುಶಿಲ್ಪಿ ಅಮೀರ್ ಶರ್ಮಾ ಡಿಸೈನ್ ಮಾಡಿದ್ದಾರೆ. ಇಲ್ಲಿ ಅಲ್ಲು ಅರ್ಜುನ್ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಸರಳವಾದ ಬಿಳಿ ಗೋಡೆಗಳು, ಗಿಡ-ಮರಗಳು, ದೊಡ್ಡ ಕೋಣೆಗಳು, ವಿಶಾಲವಾದ ಲಿವಿಂಗ್ ರೂಮ್, ಬಾರ್ ಏರಿಯಾ, ಮನರಂಜನಾ ಕೊಠಡಿ, ಜಿಮ್ ಏರಿಯಾ, ಕಾರು ಪಾರ್ಕಿಂಗ್, ಒಂದು ಮುದ್ದಾದ ಮಕ್ಕಳ ಕೊಠಡಿ ಕೂಡ ಇದೆ. ಮನೆಯ ಮೇಲ್ಗಡೆ ಈಜುಕೊಳವೊಂದು ಸಹ ಇದೇ ಎನ್ನಲಾಗಿದೆ. ಅವರು ತಮ್ಮ ಮನೆಯ ಇಂಟೀರಿಯರ್ ಡಿಸೈನ್ ಗೆ ಬರೋಬ್ಬರಿ 30-35 ಕೋಟಿ ರೂ. ಖರ್ಚು ಮಾಡಿದ್ದಾರಂತೆ. ಬಂಗಲೆಯಲ್ಲಿ ಇರುವ ಮನರಂಜನಾ ಕೊಠಡಿಯ ವಸ್ತುಗಳಿಗೂ ಬರೋಬ್ಬರಿ 3-4 ಕೋಟಿ ರೂ. ಖರ್ಚಾಗಿದೆ. ಇಷ್ಟೆಲ್ಲಾ ಸೌಲಭ್ಯಗಳು ಇರುವ ಅಲ್ಲು ಮನೆಯ ಫೋಟೋಗಳು, ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.