
ಸಕಲೇಶಪುರ: ಆತಂಕ ಹುಟ್ಟಿಸಿದ್ದ 11 ಅಡಿ ಉದ್ದದ ಕಾಳಿಂಗ ಸರ್ಪ ಹಿಡಿದ ಸ್ನೇಕ್ ಸಗೀರ್
Monday, January 10, 2022
ಸಕಲೇಶಪುರ: ಇಲ್ಲಿನ ಕುಂಬರಡಿ ಎಂಬ ಗ್ರಾಮದಲ್ಲಿ ಕಾಣಿಸಿಕೊಂಡ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದನ್ನು ಉರಗ ಸ್ನೇಹಿ ಸಗೀರ್ ಅವರು ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿಗೆ ಒಪ್ಪಿಸಿದ್ದಾರೆ.
ಹಾನುಬಾಳ್ ಹೋಬಳಿ ಹೆಬ್ಬಸಾಲೆ ಗ್ರಾಪಂ ವ್ಯಾಪ್ತಿಯ ಕುಂಬರಡಿ ಗ್ರಾಮದ ನಿಂಗಪ್ಪ ಎಂವವರ ಕಾಫಿ ತೋಟದಲ್ಲಿ ಏಕಾಏಕಿ ಬೃಹತ್ ಗಾತ್ರದ ಕಾಳಿಂಗಸರ್ಪವೊಂದು ಕಾಣಿಸಿಕೊಂಡಿದೆ. ಪರಿಣಾಮ ಆತಂಕಿತರಾದ ಮನೆಯವರು ಸ್ಥಳೀಯರ ಸಹಾಯದಿಂದ ಹಾವಿನ ಚಲನವಲನಗಳನ್ನು ಗಮನಿಸಿ ಪಟ್ಟಣದ ಉರಗ ಸ್ನೇಹಿ ಸಗೀರ್‌ರವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಗೀರ್, ಗ್ರಾಮಸ್ಥರಾದದ ಶಶಿಧರ್, ಸುರೇಶ್, ತನುಜ್, ವಿಜಿತ್‌ರವರ ಸಹಾಯದಿಂದ ಹಾವನ್ನು ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿಗೆ ಒಪ್ಪಿಸಿದ್ದಾರೆ.
ಕಳೆದ ಹಲವಾರು ದಿನಗಳಿಂದ ಸುಮಾರು 11 ಅಡಿ ಉದ್ದದ ಈ ಕಾಳಿಂಗ ಸರ್ಪವು ನಿಂಗಪ್ಪ ಹಾಗೂ ಅವರ ಅಕ್ಕಪಕ್ಕದ ಕಾಫಿ ತೋಟಗಳಲ್ಲಿ ಸಂಚರಿಸಿ ಗ್ರಾಮಸ್ಥರಲ್ಲಿ ಆತಂಕವನ್ನು ಸೃಷ್ಟಿ ಮಾಡಿತ್ತು. ಇದೀಗ ಉರಗ ಸ್ನೇಹಿ ಸ್ನೇಕ್ ಸಗೀರ್ ಹಾಗೂ ಗ್ರಾಮಸ್ಥರ ಸಹಾಯದಿಂದ ಕಾಳಿಂಗಸರ್ಪವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದು ಗ್ರಾಮಸ್ಥರಲ್ಲಿ ನೆಮ್ಮದಿ ತಂದಿದೆ.