
18 ವರ್ಷಗಳ ದಾಂಪತ್ಯ ಜೀವನಕ್ಕೆ ದಿಢೀರ್ ಅಂತ್ಯ ಹಾಡಿದ ಕಾಲಿವುಡ್ ಸೂಪರ್ ಸ್ಟಾರ್ ಧನುಷ್!
Tuesday, January 18, 2022
ಚೆನ್ನೈ: ಕಾಲಿವುಡ್ ನ ಸೂಪರ್ಸ್ಟಾರ್ ಧನುಷ್ ತಮ್ಮ 18 ವರ್ಷದ ಸುದೀರ್ಘ ದಾಂಪತ್ಯ ಜೀವನಕ್ಕೆ ದಿಢೀರ್ ಎಂದು ಗುಡ್ ಬೈ ಹೇಳಿದ್ದಾರೆ.
ಸೂಪರ್ಸ್ಟಾರ್ ರಜನಿಕಾಂತ್ ಅವರ ಹಿರಿಯ ಪುತ್ರಿ ಐಶ್ವರ್ಯಾರವರನ್ನು ವಿವಾಹವಾಗಿದ್ದ ಧನುಷ್, ಇದೀಗ ಟ್ವಿಟರ್ ನಲ್ಲಿ ತಾನು ವಿಚ್ಛೇದನ ನೀಡುವುದಾಗಿ ಘೋಷಣೆ ಮಾಡಿ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಈ ಬಗ್ಗೆ ಬರೆದ ಅವರು 'ಸ್ನೇಹಿತರಾಗಿ, ಸತಿ-ಪತಿಯರಾಗಿ, ಪೋಷಕರಾಗಿ ಹಾಗೂ ಪರಸ್ಪರ ಹಿತೈಷಿಗಳಾಗಿ ಈ 18 ವರ್ಷಗಳನ್ನು ಜೊತೆಯಾಗಿ ಕಳೆದೆವು. ಈ ಸುದೀರ್ಘ ಪ್ರಯಾಣವು ಬೆಳವಣಿಗೆ, ತಿಳುವಳಿಕೆ ಹಾಗೂ ಹೊಂದಿಕೊಳ್ಳುವಿಕೆಯಿಂದ ಕೂಡಿತ್ತು. ಆದರೆ, ಇದೀಗ ನಾವು ನಮ್ಮ ನಮ್ಮ ದಾರಿಯಲ್ಲಿ ಪ್ರತ್ಯೇಕಗೊಳ್ಳುವ ಸ್ಥಳದಲ್ಲಿ ನಿಂತಿದ್ದೇವೆ' ಎಂದು ಧನುಷ್ ಟ್ವೀಟ್ ಮಾಡಿದ್ದಾರೆ.
ಅದಲ್ಲದೆ, ತಮ್ಮ ಅಭಿಮಾನಿಗಳಲ್ಲಿ ಧನುಷ್ ಮನವಿಯೊಂದನ್ನು ಮಾಡಿದ್ದು, 'ನಮ್ಮ ನಿರ್ಧಾರವನ್ನು ಗೌರವಿಸಿ, ನಮಗೆ ಬೇಕಾಗಿರುವ ಖಾಸಗಿತನವನ್ನು ನೀಡಿ' ಎಂದು ಹೇಳಿದ್ದಾರೆ. ಐಶ್ವರ್ಯಾ ಕೂಡ ಈ ಬಗ್ಗೆ ಹೇಳಿಕೆಯನ್ನು ನೀಡಿದ್ದು, ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ನಿಮ್ಮ ತಿಳುವಳಿಕೆ ಮತ್ತು ಪ್ರೀತಿ ಮಾತ್ರ ಅಗತ್ಯ ಎಂದು ಜನರಲ್ಲಿ ಕೋರಿದ್ದಾರೆ.
ಐಶ್ವರ್ಯಾ ಹಾಗೂ ಧನುಷ್ 2004ರ ನವೆಂಬರ್ 18ರಂದು ವಿವಾಹವಾಗಿದ್ದರು. ಈ ದಂಪತಿಗಳಿಗೆ ಯಾತ್ರ ಹಾಗೂ ಲಿಂಗ ಎಂಬ ಇಬ್ಬರು ಪುತ್ರರಿದ್ದಾರೆ.