
ಅತ್ಯಾಚಾರಕ್ಕೊಳಗಾಗಿರುವ 19 ವರ್ಷದ ಯುವತಿ ಮೃತದೇಹವಾಗಿ ಪತ್ತೆ
Wednesday, January 26, 2022
ಕಣ್ಣೂರು (ಕೇರಳ): ಅತ್ಯಾಚಾರಕ್ಕೊಳಗಾಗಿರುವ 19 ವರ್ಷದ ಯುವತಿ ತನ್ನ ಮನೆಯಲ್ಲಿ ಮೃತದೇಹವಾಗಿ ಪತ್ತೆಯಾಗಿರುವ ಘಟನೆ ತಳಿಪರಂಬದಲ್ಲಿ ನಡೆದಿದೆ. ಸಂತ್ರಸ್ತೆ ಸೋಮವಾರ ರಾತ್ರಿ ಸ್ವಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಈಕೆ ಅಪ್ರಾಪ್ತೆಯಾಗಿದ್ದಾಗ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿದ್ದ ವ್ಯಕ್ತಿಯೋರ್ವನು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪಾಲಕ್ಕಾಡ್ ಜಿಲ್ಲೆಯ ಆರೋಪಿ ರಾಹುಲ್ ಕೃಷ್ಣನನ್ನು ಆಗ ಪೊಕ್ಸೊ ಕಾಯ್ದೆಯಡಿ ಬಂಧಿಸಿ ಜೈಲಿಗೆ ತಳ್ಳಲಾಗಿತ್ತು. ಇದೀಗ ಆಕೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಕಳೆದ ಒಂದು ವಾರದಲ್ಲಿ ಕೇರಳದಲ್ಲಿ ಮತ್ತೋರ್ವ ಅತ್ಯಾಚಾರ ಸಂತ್ರಸ್ತೆ ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ಎರಡನೇ ಘಟನೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಬಂಧಿಕರಿಂದಲೇ ಪದೇ ಪದೆ ಅತ್ಯಾಚಾರಕ್ಕೊಳಗಾದ 18ರ ಯುವತಿ ಜನವರಿ 20 ರಂದು ಕೋಝಿಕ್ಕೋಡ್ ಬಳಿಯ ತೆನ್ಹಿಪಾಲಂನಲ್ಲಿರುವ ತನ್ನ ನಿವಾಸದಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದರು. ಈ ಪ್ರಕರಣದ ಆರೋಪಿಗಳ ವಿರುದ್ಧವೂ ಎರಡು ವರ್ಷಗಳ ಹಿಂದೆಯೇ ಪೊಕ್ಸೊ ಕಾಯ್ದೆ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.