
ಪತಿಯನ್ನು ಅರಸಿಕೊಂಡು ಬಂದಳು ಎರಡನೇ ಪತ್ನಿ: ಸಂಸಾರ ನಡೆಸಲು 25 ಲಕ್ಷ ರೂ.ಗೆ ಬೇಡಿಕೆಯಿಟ್ಟ ವಂಚಕ
Tuesday, January 25, 2022
ಬೆಂಗಳೂರು: ಇಲ್ಲೊಬ್ಬ ವಂಚಕ ಎರಡನೇ ಮದುವೆಯಾಗಿ ಯುವತಿಯನ್ನು ಮೋಸಗೊಳಿಸಿದ್ದಲ್ಲದೆ, ಎರಡನೇ ಪತ್ನಿಗೆ ಮಗುವನ್ನೂ ಕೊಟ್ಟು, ಬಳಿಕ ಸಂಸಾರ ಮಾಡುವುದಕ್ಕೆ ಹಣ ಕೇಳಿದ್ದಾನೆ. ಇಂಥಹ ವಂಚಕ ಪತಿಯನ್ನು ಹುಡುಕಿಕೊಂಡು ಎರಡನೇ ಪತ್ನಿ ಇದೀಗ ಆಂಧ್ರಪ್ರದೇಶದಿಂದ ಕರ್ನಾಟಕಕ್ಕೆ ಬಂದಿದ್ದಾಳೆ.
ಈತನಿಗೆ ಈಗಾಗಲೇ ಒಂದು ಮದುವೆ ಆಗಿದೆ. ಆದರೆ ಅದನ್ನು ಆತ ಮುಚ್ಚಿಟ್ಟು, ಆಂಧ್ರಪ್ರದೇಶದ ಕರ್ನೂಲ್ನಲ್ಲಿ ಮತ್ತೊಬ್ಬ ಯುವತಿಯನ್ನು ಮದುವೆಯಾಗಿದ್ದಾನೆ. ಇದೀಗ ಒಂದು ಮಗುವಾದ ಬಳಿಕ ಸಂಸಾರ ಮಾಡಲು ಹಣ ಕೇಳಿದ್ದಾನೆ.
ಮದುವೆಯ ಸಮಯದಲ್ಲಿ 400 ಗ್ರಾಂ ಚಿನ್ನಾಭರಣ, ಒಂದು ಕ್ರೆಟಾ ಕಾರು, 20 ಲಕ್ಷ ರೂ ಹಣ ಪಡೆದು ಮದುವೆಯಾಗಿದ್ದ. ಆದರೆ ಕೆಲವೇ ದಿನಗಳಲ್ಲಿ ಮೊದಲ ಮದುವೆಯ ವಿಚಾರ ಗೊತ್ತಾಗಿದೆ. ಈ ಬಗ್ಗೆ ಪ್ರಶ್ನೆ ಮಾಡಿರುವುದಕ್ಕೆ, ಸಂಸಾರ ಮಾಡಬೇಕಂದರೆ 25 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾನೆ.
ಇದಕ್ಕೆ ಒಪ್ಪದಿದ್ದಾಗ ಎರಡನೇ ಪತ್ನಿಯನ್ನು ಆಂಧ್ರಪ್ರದೇಶದ ಕರ್ನೂಲ್ನ ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದಾನೆ. ಬಳಿಕ ಆತನ ಮೇಲೆ ದೂರು ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದಾನೆ. ಇದೀಗ ಎರಡನೇ ಪತ್ನಿ ಈತನನ್ನು ಹುಡುಕಿಕೊಂಡು ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಬಂದು ಇಲ್ಲಿನ ಜೆ.ಸಿ.ನಗರ ಪೊಲೀಸರ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಲ್ಮಾನ್ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.