
ಮಂಗಳೂರು: ಹನಿಟ್ರ್ಯಾಪ್ ಮಾಡಿ ಜ್ಯೋತಿಷಿಯಿಂದ 49 ಲಕ್ಷ ರೂ. ಪೀಕಿಸಿದ ಜೋಡಿ ಪೊಲೀಸ್ ಬಲೆಗೆ
Friday, January 21, 2022
ಮಂಗಳೂರು: ಜ್ಯೋತಿಷಿಯೋರ್ವನನ್ನು ಹನಿಟ್ರ್ಯಾಪ್ ಮಾಡಿ ಬರೋಬ್ಬರಿ 49 ಲಕ್ಷ ರೂ. ಹಣ ದೋಚಿದ ಜೋಡಿಯೊಂದನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಪದವಿನಂಗಡಿ ನಿವಾಸಿಗಳಾದ ಕೊಡಗು ಮೂಲದ ಭವ್ಯಾ(30), ಹಾಸನ ಮೂಲದ ಕುಮಾರ್ ಅಲಿಯಾಸ್ ರಾಜು ಬಂಧಿತ ಆರೋಪಿಗಳು.
ಆರೋಪಿಗಳು ತಾವಿಬ್ಬರೂ ದಂಪತಿಗಳು ನಮ್ಮ ಮಧ್ಯೆ ಹೊಂದಾಣಿಕೆಯಿಲ್ಲ. ಆದ್ದರಿಂದ ನಮ್ಮ ಪದವಿನಂಗಡಿಯ ಮನೆಗೆ ಬಂದು ಪೂಜೆ ಮಾಡಬೇಕೆಂದು ಕರೆಸಿಕೊಂಡಿದ್ದಾರೆ. ಆ ಬಳಿಕ ಜ್ಯೋತಿಷಿಯು ಆರೋಪಿತೆ ಭವ್ಯಾ ಜೊತೆಗಿದ್ದ ವೀಡಿಯೋ, ಫೋಟೋಗಳು ಹಾಗೂ ಆಡಿಯೋಗಳನ್ನು ಇರಿಸಿಕೊಂಡು ಜ್ಯೋತಿಷಿಗೆ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದಾರೆ. ಈ ಮೂಲಕ ವೀಡಿಯೋ, ಫೋಟೋಗಳು ಹಾಗೂ ಆಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆಯನ್ನೊಡ್ಡಿ 15 ಲಕ್ಷ ರೂ. ನಗದು ಹಾಗೂ 34 ಲಕ್ಷ ರೂ. ಬೇರೆ ಬೇರೆ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.
ಜ್ಯೋತಿಷಿ ಸಂಬಂಧಿಕರು, ಸ್ನೇಹಿತರಲ್ಲಿ ಸಾಲ ಪಡೆದು ಈ ಹಣವನ್ನು ನೀಡಿದ್ದ. ಆದರೂ ಮತ್ತೆ ಮತ್ತೆ ಹಣಕ್ಕೆ ಬೇಡಿಕೆಯಿಟ್ಟಿರುವುದರಿಂದ ಬೇಸತ್ತ ಜ್ಯೋತಿಷಿ ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಆತ ನೀಡಿರುವ ದೂರಿನನ್ವಯ ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದ್ದು, ಹೆಚ್ಚಿನ ತನಿಖೆಗೆ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.