
5 ತಿಂಗಳ ಹಿಂದಷ್ಟೇ ನಟಿ ನಿಕ್ಕಿ ಗಲ್ರಾನಿ ಮನೆಗೆ ಕೆಲಸಕ್ಕೆ ಸೇರಿದ್ದ ಯುವಕ ಮಾಡಿದ್ದೇನು ಗೊತ್ತೇ?
Thursday, January 20, 2022
ಚೆನ್ನೈ: ನಟಿ ನಿಕ್ಕಿ ಗಲ್ರಾನಿ ಚೆನ್ನೈ ರಾಯಪೇಟ್ನಲ್ಲಿರುವ ಮನೆಯಲ್ಲಿ ಕಳವು ನಡೆದಿದ್ದು, ನಟಿ ನೀಡಿರುವ ದೂರಿನನ್ವಯ ಪೊಲೀಸರು ತನಿಖೆ ನಡೆಸಿ ಆರೋಪಿ ಮನೆಗೆಲಸದವನನ್ನು ಬಂಧಿಸಿದ್ದಾರೆ.
ಮನೆಕೆಲಸಗಾರ ಧನುಷ್(19) ಬಂಧಿತ ಆರೋಪಿ. ಈತ ಮನೆಯಿಂದ 1 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳವುಗೈದಿರುವುದಾಗಿ ಆರೋಪಿಸಿ ನಟಿ ನಿಕ್ಕಿ ಗಲ್ರಾನಿ ದೂರು ದಾಖಲಿಸಿದ್ದರು.
ಆರೋಪಿ ಧನುಷ್ನನ್ನು ತ್ರಿಪುರಾದಲ್ಲಿರುವ ಆತನ ಸ್ನೇಹಿತನ ಮನೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ನಿಕ್ಕಿ ಗಲ್ರಾನಿ ಮನೆಯಿಂದ ಕದ್ದಿರುವ ವಸ್ತುಗಳು ಹಾಗೂ ದುಬಾರಿ ಬೆಲೆಯ ಬಟ್ಟೆಗಳನ್ನು ಆರೋಪಿಯಿಂದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ ಇತರರು ಭಾಗಿಯಾಗಿರುವ ಸಂಶಯ ವ್ಯಕ್ತವಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಡ್ಡಲೂರು ಜಿಲ್ಲೆಯ ವಿರುದಾಚಲಂ ಮೂಲದ ಧನುಷ್ 5 ತಿಂಗಳ ಹಿಂದೆಯಷ್ಟೇ ನಿಕ್ಕಿ ಗಲ್ರಾನಿ ಮನೆಗೆ ಕೆಲಸಕ್ಕೆ ಸೇರಿದ್ದ. ಜನವರಿ 11ರಂದು ಒಂದು ಮೂಟೆಯೊಂದಿಗೆ ಧನುಷ್ ಮನೆ ಬಿಟ್ಟು ಹೋಗುವುದನ್ನು ನಿಕ್ಕಿ ಗಮನಿಸಿದ್ದಾರೆ. ಈ ವೇಳೆ ಅವರು ಆತನನ್ನು ಹಿಂಬಾಲಿಸಿ ಹಿಡಿಯಲು ಯತ್ನಿಸಿದ್ದಾರೆ. ಆದರೆ, ಆತ ಕೈಗೆ ಸಿಗದೇ ಇದ್ದಾಗ ಮನೆಗೆ ಹಿಂತಿರುಗಿ ಪರಿಶೀಲನೆ ನಡೆಸಿದ್ದಾರೆ. ಆಗ ಆತ 40 ಸಾವಿರ ರೂ. ಬೆಲೆ ಬಾಳುವ ಕ್ಯಾಮೆರಾ ಹಾಗೂ ಕೆಲವು ದುಬಾರಿ ಬಟ್ಟೆಗಳು, ಅದರಲ್ಲೂ ತಮಗೆ ತುಂಬಾ ಪ್ರಿಯವಾದ ಬಟ್ಟೆಗಳನ್ನು ಧನುಷ್ ದೋಚಿಕೊಂಡು ಹೋಗಿರುವುದು ಗೊತ್ತಾಗಿದೆ. ಅಂದೇ ಪೊಲೀಸ್ ಠಾಣೆಗೆ ತೆರಳಿ ನಿಕ್ಕಿ ದೂರು ದಾಖಲಿಸಿದ್ದರು.
ಈ ಬಗ್ಗೆ ತನಿಖೆ ಮಾಡಿರುವ ಪೊಲೀಸರು ಆರೋಪಿ ಧನುಷ್ನನ್ನು ನಿನ್ನೆ ಆತನ ಸ್ನೇಹಿತನ ಮನೆಯಲ್ಲಿ ಬಂಧಿಸಿದ್ದರು. ಕಳುವಾಗಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಇನ್ನು ನಿಕ್ಕಿ ಗಲ್ರಾನಿ ಸಿನಿಮಾ ವಿಚಾರಕ್ಕೆ ಬಂದಲ್ಲಿ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ನಿಕ್ಕಿ ಗಲ್ರಾನಿ ಅವರಿಗೆ ಬಹಳ ಬೇಡಿಕೆ ಇದೆ. ವೆಲ್ಲಿಮೂಂಗಾ ಚಿತ್ರದಲ್ಲಿ ನಟಿಸಿದ ಬಳಿಕ ಮಲಯಾಳಂನಲ್ಲಿ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ತಮಿಳು ಚಿತ್ರರಂದಲ್ಲಿ ಹೆಚ್ಚು ಸಕ್ರಿಯರಾಗಿರುವ ನಿಕ್ಕಿ, ಕನ್ನಡದಲ್ಲೂ ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ. ಅಂದಹಾಗೆ ನಿಕ್ಕಿ ಕನ್ನಡದವರು. ನಟಿ ಸಂಜನಾ ಗಲ್ರಾನಿ ಅವರ ಸಹೋದರಿ. ಆದರೆ, ಕನ್ನಡ ಚಿತ್ರರಂಗದಲ್ಲಿ ಅವಕಾಶ ಇಲ್ಲದಿರುವುದರಿಂದ ತಮಿಳು ಚಿತ್ರರಂಗದಲ್ಲಿ ಬಿಜಿಯಾಗಿದ್ದಾರೆ.