
ಕೋವಿಶೀಲ್ಡ್ ಲಸಿಕೆಯಿಂದ 55 ವರ್ಷದ ವೃದ್ಧನ ಪಾರ್ಶ್ವವಾಯು ಶಮನ, ನಿಂತ ಧ್ವನಿ ಮರುಕಳಿಸಿತು!
Saturday, January 15, 2022
ಬೊಕಾರೊ (ಜಾರ್ಖಂಡ್): 4 ವರ್ಷಗಳ ಹಿಂದೆ ಅಪಘಾತಕ್ಕೊಳಗಾಗಿ ಪಾರ್ಶ್ವವಾಯುವಿಗೆ ತುತ್ತಾಗಿದ್ದ ಹಾಗೂ ತನ್ನ ಧ್ವನಿಯನ್ನೇ ಕಳೆದುಕೊಂಡಿದ್ದ 55 ವರ್ಷದ ವ್ಯಕ್ತಿಯೊಬ್ಬರು ಕೋವಿಶೀಲ್ಡ್ ಲಸಿಕೆ ಪಡೆದ ಬಳಿಕ ನಡೆಯಲು, ಮಾಡನಾಡಲು ಆರಂಭಿಸಿರುವ ವಿಚಿತ್ರ ಸಂಭವಿಸಿರುವ ಬಗ್ಗೆ ವರದಿಯಾಗಿದೆ.
ಬೊಕಾರೊದ ಸಲ್ಗಾಡಿಹ್ ಗ್ರಾಮದ ದುಲರ್ ಚಂದ್ ಮುಂಡಾ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ “ಕೋವಿಶೀಲ್ಡ್ ಲಸಿಕೆಯನ್ನು ಜನವರಿ 4 ರಂದು ಪಡೆದುಕೊಂಡಿದ್ದೇನೆ. ಆ ಬಳಿಕ ಸ್ವಾಧೀನ ಕಳೆದುಕೊಂಡ ನನ್ನ ಕಾಲುಗಳಿಗೆ ಚೈತನ್ಯ ಶಕ್ತಿ ತುಂಬಿದ್ದು ಚಲಿಸಲು ಆರಂಭಿಸಿದ್ದೇನೆ" ಎಂದು ಹೇಳಿದ್ದಾರೆ.
ದುಲರ್ ಚಂದ್ ಮುಂಡಾ ಅವರ ಕುಟುಂಬದ ಪ್ರಕಾರ, 4 ವರ್ಷಗಳ ಹಿಂದೆ ಅಪಘಾತದ ಬಳಿಕ ಅವರು ಪಾರ್ಶ್ವವಾಯುವಿಗೆ ಒಳಗಾಗಿದ್ದಲ್ಲದೆ, ಮಾತನಾಡುವ ಶಕ್ತಿಯನ್ನೂ ಕಳೆದುಕೊಂಡಿದ್ದರು. ಆದರೆ ಕೋವಿಡ್ ಲಸಿಕೆ ತೆಗೆದುಕೊಂಡ ಬಳಿಕ ಈ ಪವಾಡ ಸಂಭವಿಸಿದೆ ಎಂದು ಹೇಳಿಕೊಂಡಿದ್ದಾರೆ.
ಬೊಕಾರೊನ ಸಿವಿಲ್ ಸರ್ಜನ್ ಡಾ. ಜಿತೇಂದ್ರ ಕುಮಾರ್ ಆಶ್ಚರ್ಯ ವ್ಯಕ್ತಪಡಿಸಿದ್ದು, ಈ ಬಗ್ಗೆ ವೈದ್ಯಕೀಯ ಇತಿಹಾಸವನ್ನು ವಿಶ್ಲೇಷಿಸಲು ವೈದ್ಯಕೀಯ ತಂಡವನ್ನು ರಚಿಸುವಂತೆ ಕೇಳಿಕೊಂಡಿದ್ದಾರೆ.
ಇದನ್ನು ನೋಡಿ ಆಶ್ಚರ್ಯವಾಗಿದೆ. ಆದರೆ ಈ ಬಗ್ಗೆ ವಿಜ್ಞಾನಿಗಳು ಖಚಿತಪಡಿಸಿಕೊಳ್ಳಬೇಕು. ದುಲರ್ ಚಂದ್ ಮುಂಡಾ ಕೆಲವು ದಿನಗಳಿಗಿಂತ ಹಳೆಯ ಅನಾರೋಗ್ಯ ಸ್ಥಿತಿಯಿಂದ ಚೇತರಿಸಿಕೊಂಡಿದ್ದರೆ. ಅದನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ನಾಲ್ಕು ವರ್ಷಗಳಲ್ಲಿ ಇದ್ದ ಸ್ಥಿತಿಯಿಂದ ಲಸಿಕೆ ತೆಗೆದುಕೊಂಡ ಬಳಿಕ ಇದ್ದಕ್ಕಿದ್ದಂತೆ ಚೇತರಿಸಿಕೊಂಡಿದ್ದಾರೆ ನಂಬಲಾಗುತ್ತಿಲ್ಲ” ಎಂದು ಡಾ.ಜಿತೇಂದ್ರ ಕುಮಾರ್ ಹೇಳಿದ್ದಾರೆ.