
60ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಿಸ್ ಯುಎಸ್‌ಎ: ತಲ್ಲಣಗೊಂಡ ಫ್ಯಾಷನ್ ಜಗತ್ತು
Tuesday, February 1, 2022
ನ್ಯೂಯಾರ್ಕ್: 2019ರಲ್ಲಿ ಮಿಸ್ ಯುಎಸ್‌ಎ (ಅಮೆರಿಕ ಸುಂದರಿ) ಆಗಿ ಕಿರೀಟ ಮುಡಿಗೇರಿಸಿದ್ದ ಚೆಸ್ಲಿ ಕ್ರಿಸ್ಟ್ 60ನೇ ಮಹಡಿಯಿಂದ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಆತ್ಮಹತ್ಯೆಯ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಇನ್ಮಷ್ಟೇ ನಿಖರ ಮಾಹಿತಿ ಹೊರಬರಬೇಕಿದೆ.
ಮಾಡೆಲ್, ವಕೀಲೆ, ವರದಿಗಾರ್ತಿಯಾಗಿಯೂ ಖ್ಯಾತಿ ಪಡೆದಿದ್ದ ಚೆಸ್ಲಿ ಕ್ರಿಸ್ಟ್ ಫ್ಯಾಷನ್ ಲೋಕದಲ್ಲಿ ಭಾರೀ ಹೆಸರು ಗಳಿಸಿದ್ದರು. 1991 ರಲ್ಲಿ ಜನಿಸಿರುವ ಈಕೆ ವೇಕ್ ಫಾರೆಸ್ಟ್ ಯೂನಿವರ್ಸಿಟಿ ಸ್ಕೂಲ್ ಆಫ್ ಲಾದಿಂದ ಕಾನೂನು ಪದವಿ ಪಡೆದು ವಕೀಲೆಯಾಗಿ ಖ್ಯಾತಿ ಹೊಂದಿದ್ದರು. ಅಮೆರಿಕಾದ ಎಕ್ಸ್‌ಟ್ರಾ ಟಿವಿಯಲ್ಲಿ ವರದಿಗಾರ್ತಿಯಾಗಿಯೂ ಕಾರ್ಯನಿರ್ವಹಿಸಿದ್ದರು.
ಚೆಸ್ಲಿ ಕ್ರಿಸ್ಟ್, ‘ವೈಟ್ ಕಾಲರ್ ಗ್ಲಾಮ್’ ಎಂಬ ಫ್ಯಾಷನ್ ಬ್ಲಾಗ್ ಸ್ಥಾಪಿಸಿ ಜಗದ್ವಿಖ್ಯಾತಿ ಗಳಿಸಿದ್ದರು. ಫ್ಯಾಷನ್ ಜಗತ್ತಿನ ಹಲವಾರು ತಾರೆಯರು ಆತ್ಮಹತ್ಯೆಯ ಹಾದಿ ತುಳಿಯುತ್ತಿರುವ ಪರಿಣಾಮ ಇಡೀ ಫ್ಯಾಷನ್ ಜಗತ್ತೀಗ ತಲ್ಲಣಗೊಂಡಿದೆ.
2021ರ ಮಿಸ್ ಯೂನಿವರ್ಸ್ ಆಗಿ ಹೊರಹೊಮ್ಮಿರುವ ಭಾರತದ ಹರ್ನಾಜ್ ಸಂಧು ಅವರು ಚೆಸ್ಲಿ ಕ್ರಿಸ್ಟ್ ನಿಧನದಿಂದ ಆಘಾತವಾಗಿದೆ ಎಂದಿದ್ದಾರೆ. ಭುವನ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ಬಳಿಕ ಜೆಸ್ಲಿ ಕ್ರಿಸ್ಟ್ ರೊಂದಿಗೆ ತೆಗೆಸಿಕೊಂಡಿದ್ದ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹರ್ನಾಜ್ ಶೇರ್ ಮಾಡಿಕೊಂಡಿದ್ದಾರೆ. “ಇದು ನಂಬಲಾಗದ ಸಂಗತಿ, ನೀವು ಯಾವಾಗಲೂ ಅನೇಕರಿಗೆ ಸ್ಫೂರ್ತಿಯಾಗಿದ್ದೀರಿ. ರೆಸ್ಟ್ ಇನ್ ಪೀಸ್ ಚೆಸ್ಲಿ” ಎಂದು ಬರೆದುಕೊಂಡಿದ್ದಾರೆ.