
ಬ್ಯಾಂಕ್ ಖಾತೆಗೆ ಜಮೆಯಾದ 75 ಕೋಟಿ ರೂ.: ದಿಢೀರ್ ಹಣ ಬಂದಿರೋದು ನೋಡಿ ಥರಥರ ನಡುಗುತ್ತಿರುವ ವೃದ್ಧ
Thursday, January 13, 2022
ರಾಂಚಿ: ಕೆಲವೊಂದು ಸಲ ಅದೃಷ್ಟ ಯಾವ ರೀತಿ ಕುಲಾಯಿಸುತ್ತೋ, ಯಾವ ರೂಪದಲ್ಲಿ ಬರುತ್ತದೋ ಎಂದು ಅಂದಾಜಿಸಲಾಗದು. ಕೆಲವೊಮ್ಮೆ ಗುಡಿಸಲಿನಲ್ಲಿರುವವರೂ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನಾವು ನೋಡುತ್ತಲೇ ಇರುತ್ತೇವೆ. ಇದೀಗ ಅಂಥಹದ್ದೇ ಅದೃಷ್ಟವೊಂದು ಬಡ ವೃದ್ಧನಿಗೆ ಕುಲಾಯಿಸಿದೆ.
ಯಾರಾದರೂ ಈ ಸ್ಟೋರಿ ಓದಿದಲ್ಲಿ ಏನು ಅದೃಷ್ಟನಪ್ಪ ಇದು ಎಂದು ಹುಬ್ಬೇರಿಸದೇ ಇರಲಾರರು. ಜಾರ್ಖಂಡ್ನ ವೃದ್ಧರೊಬ್ಬರ ಬ್ಯಾಂಕ್ ಖಾತೆಗೆ ಬರೋಬ್ಬರಿ 75 ಕೋಟಿ ರೂ. ಹಣ ಡೆಪಾಸಿಟ್ ಆಗಿದೆ. ಈ ವಿಚಾರ ತಿಳಿದು ವೃದ್ಧ ಏನು ಮಾಡಬೇಕೆಂದು ತೋಚದೆ ಕಂಗಾಲಾಗಿದ್ದಾರೆ. ಡುಮ್ಕ ಜಿಲ್ಲೆ ಜಾರ್ಮುಂಡಿ ವಲಯದ ಸಾಗರ ಗ್ರಾಮದಲ್ಲಿ ಪುಲೊರೈ ಎಂಬ ವೃದ್ಧ ತನ್ನ ಪತ್ನಿ ಮತ್ತು ನಾಲ್ವರು ಮಕ್ಕಳೊಂದಿಗೆ ಸಣ್ಣ ಗುಡಿಸಲಿನಲ್ಲಿ ವಾಸವಿದ್ದಾರೆ. ಇವರು ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಅಚ್ಚರಿಯೇನೆಂದರೆ, ಪುಲೊರೈ ಅವರ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಖಾತೆಗೆ 75 ಕೋಟಿ ರೂ. ಜಮೆ ಆಗಿದೆ. ಪಿಂಚಣಿ ಹಣ ಪಡೆಯಲು ಹೋದಾಗ ಈ ವಿಚಾರ ತಿಳಿದು ವೃದ್ಧನಿಗೆ ಶಾಕ್ ಆಗಿದೆ. ತನ್ನ ಖಾತೆಯಿಂದ ವೃದ್ಧ 10 ಸಾವಿರ ರೂಪಾಯಿ ಡ್ರಾ ಮಾಡಿದ್ದರು. ಆದರೆ, ಖಾತೆಯಲ್ಲಿ ಇನ್ನು 75.28 ಕೋಟಿ ರೂ. ಬ್ಯಾಲೆನ್ಸ್ ಇದೆ ಎಂದು ಬಂದಿದೆ. ಆದರೆ ವೃದ್ಧ ಪುಲೊರೈ ಈ ಹಣ ಹೇಗೆ ಬಂತೆಂದು ನನಗೆ ತಿಳಿದಿಲ್ಲ ಎಂದಿದ್ದಾರೆ. ಮಂಗಳವಾರ ಮತ್ತೆ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ 75 ಕೋಟಿ ರೂ. ಬದಲಾಗಿ 5 ಕೋಟಿ ರೂ. ಅಕೌಂಟ್ನಲ್ಲಿತ್ತು. ಈಗಲೂ ಸಹ 5 ಕೋಟಿ ರೂ. ಹಾಗೇ ಇದೆ. ಉಳಿದ 70 ಕೋಟಿ ರೂ. ಏನಾಗಿದೆ ಎಂದು ತಿಳಿದಿಲ್ಲವೆಂದು ವೃದ್ಧ ಹೇಳಿದ್ದಾರೆ.
ಇದೀಗ ವೃದ್ಧನ ಖಾತೆಯ ಕರಾಮತ್ತು ತಿಳಿದು ವಿಚಾರ ತಿಳಿದ ಅನೇಕರು ಆತನನ್ನು ಭೇಟಿ ಮಾಡಲು ಸಾಲು ಸಾಲಾಗಿ ಬರುತ್ತಿದ್ದಾರೆ. ಇತ್ತ ಭಯಭೀತನಾಗಿರುವ ವೃದ್ಧ ಇಷ್ಟೊಂದು ಹಣ ಖಾತೆಗೆ ಬಂದಿರುವುದನ್ನು ನೋಡಿದರೆ ಏನಾದರೂ ಸಂಭವಿಸುತ್ತಾ ಎಂಬ ಆತಂಕದಲ್ಲಿದ್ದಾರೆ. ಸರಿಯಾಗಿ ನಿದ್ದೆ ಕೂಡ ಬರುತ್ತಿಲ್ಲ. ಏನಾಗುತ್ತಿದೆ ಎಂದು ಗೊಂದಲದಲ್ಲಿದ್ದಾರೆ. ಅದಾಗೂ ವೃದ್ಧ ತನ್ನ ಕೆಲಸವನ್ನು ಮುಂದುವರಿಸಿದ್ದಾರೆ. ಹಣದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಬ್ಯಾಂಕ್ ಅಧಿಕಾರಿಗಳು, ತನಿಖೆ ನಡೆಸುವುದಾಗಿ ಹೇಳಿದ್ದಾರೆ.