ಮೂಳೂರು: ಬಸ್ ಢಿಕ್ಕಿಯಾಗಿ ವ್ಯಕ್ತಿ ಮೃತ್ಯು: ಅಪಘಾತದ ತೀವ್ರತೆಗೆ ಛಿದ್ರಛಿದ್ರವಾದ ಅಂಗಾಂಗ
Saturday, January 1, 2022
ಕಾಪು: ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವರಿಗೆ ಖಾಸಗಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಸಂಜೆ ಮೂಳೂರಿನಲ್ಲಿ ನಡೆದಿದೆ.
ಮೂಳೂರು ಬೀಚ್ ಬಳಿಯ ನಿವಾಸಿ ರಮೇಶ್ ಬಂಗೇರ ಅಲಿಯಾಸ್ ಹರಿ ಓಂ (65) ಮೃತಪಟ್ಟ ದುರ್ದೈವಿ.
ರಮೇಶ್ ಬಂಗೇರ ಅವರು ರಾಷ್ಟ್ರೀಯ ಹೆದ್ದಾರಿ 66ರ ಮೂಳೂರು ಬಸ್ ನಿಲ್ದಾಣದ ಹತ್ತಿರ ರಸ್ತೆ ದಾಟುತ್ತಿದ್ದರು. ಆಗ ವೇಗವಾಗಿ ಬಂದ ಮಂಗಳೂರಿನಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ಬಸ್ಸೊಂದು ಅವರಿಗೆ ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ರಮೇಶ್ ಬಂಗೇರ ದೇಹವು ಛಿದ್ರ ಛಿದ್ರವಾಗಿ ರಸ್ತೆಯಲ್ಲಿ ಚೆಲ್ಲಲ್ಪಟ್ಟಿವೆ. ಮೃತದೇಹವನ್ನು ಉಡುಪಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.
ಘಟನೆ ನಡೆದ ಸಂದರ್ಭ ಹೆದ್ದಾರಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕೆಲವು ತಿಂಗಳ ಹಿಂದೆ ಇದೇ ಜಾಗದಲ್ಲಿ ರಮೇಶ ಬಂಗೇರ ಅವರಿಗೆ ಕಾರು ಢಿಕ್ಕಿಯಾಗಿ ಪ್ರಜ್ಞೆ ತಪ್ಪಿದ್ದರು. ತಕ್ಷಣ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ, ಸೂಕ್ತ ಚಿಕಿತ್ಸೆ ಕೊಡಿಸಿದ್ದರು. ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದನ್ನು ಸ್ಥಳೀಯರು ನೆನಪಿಸಿಕೊಂಡಿದ್ದಾರೆ.