
ಆಸ್ಪತ್ರೆಗೆಂದು ಹೋಗಿದ್ದ ಮರಳಿ ದಂಪತಿ ಬಂದಿದ್ದ ಮೃತದೇಹವಾಗಿ: ಟಿಪ್ಪರ್ ಅಪಘಾತದಿಂದ ದುರಂತ ಸಾವು
Thursday, January 6, 2022
ಧಾರವಾಡ: ಎರಡು ಬೈಕ್ ಗಳು ಹಾಗೂ ಟಿಪ್ಪರ್ ನಡುವೆ ಸಂಭವಿಸಿರುವ ಭೀಕರ ಅಪಘಾತದಲ್ಲಿ ದಂಪತಿ ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ಧಾರವಾಡ ತಾಲೂಕಿನ ನವಲಗುಂದದಲ್ಲಿ ನಡೆದಿದೆ.
ನವಲಗುಂದ ತಾಲೂಕಿನ ಬೆಳವಟಗಿ ಗ್ರಾಮದ ಆನಂದ ಸಿದ್ದಗಿರಿ(35) ಹಾಗೂ ಸುಷ್ಮಾ ಸಿದ್ದಗಿರಿ(32) ಮೃತ ದುರ್ದೈವಿ ದಂಪತಿ.
ಆನಂದ ಸಿದ್ದಗಿರಿ ಹಾಗೂ ಸುಷ್ಮಾ ಸಿದ್ದಗಿರಿ ದಂಪತಿಯ ಮೂರು ವರ್ಷದ ಪುತ್ರ ಶರತ್ನಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ನವಲಗುಂದ ಆಸ್ಪತ್ರೆಗೆಂದು ದಂಪತಿ ಪುತ್ರನೊಂದಿಗೆ ಬೈಕ್ನಲ್ಲಿ ಹೋಗುತ್ತಿದ್ದರು. ಮಾರ್ಗಮಧ್ಯೆ ನವಲಗುಂದ-ನರಗುಂದ ರಸ್ತೆಯಲ್ಲಿ ಜವರಾಯನಂತೆ ಬಂದ ಟಿಪ್ಪರೊಂದು ದಂಪತಿಯಿದ್ದ ಬೈಕ್ ಗೆ ಢಿಕ್ಕಿ ಹೊಡೆದಿದೆ.
ಢಿಕ್ಕಿಯ ರಭಸಕ್ಕೆ ದಂಪತಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಆದರೆ ಮಗು ಅಪಾಯದಿಂದ ಪಾರಾಗಿದೆ. ಇದೇ ವೇಳೆ ಟಿಪ್ಪರ್ ಮತ್ತೊಂದು ಬೈಕ್ ಗೆ ಢಿಕ್ಕಿ ಹೊಡೆದಿದ್ದು, ಬೈಕ್ ಸವಾರನ ಸ್ಥಿತಿ ಗಂಭೀರವಾಗಿದೆ.
ಮಗು ಶರತ್ಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮನೆಗೆ ಕರೆದೊಯ್ಯಲಾಗಿದೆ. ಏನೂ ಅರಿಯದ ವಯಸ್ಸಲ್ಲಿ ಹೆತ್ತವರವನ್ನು ಕಳೆದುಕೊಂಡು ಮಗು ತಬ್ಬಲಿಯಾಗಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.