
ನಟಿ ಮೇಲಿನ ದೌರ್ಜನ್ಯ ಪ್ರಕರಣ: ನಟ ದಿಲೀಪ್ ಮನೆಗೆ ಅಧಿಕಾರಿಗಳು ದಾಳಿನಡೆಸಿದ್ದೇಕೆ?
Saturday, January 15, 2022
ಕೊಚ್ಚಿ: ಖ್ಯಾತ ನಟಿಯೋರ್ವರ ಮೇಲೆ 5 ವರ್ಷಗಳ ಹಿಂದೆ ದೌರ್ಜನ್ಯ ಎಸಗಿರುವ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳಿಗೆ ಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಅಪರಾಧ ವಿಭಾಗದ ಅಧಿಕಾರಿಗಳು ನಟ ದಿಲೀಪ್ ಮನೆ ಮೇಲೆ ದಾಳಿ ಮಾಡಿದ್ದಾರೆ. ಈ ಮೂಲಕ ಅಧಿಕಾರಿಗಳು ಸುಮಾರು 8 ಗಂಟೆಗಳ ಶೋಧ ಕಾರ್ಯ ನಡೆಸಿದ್ದಾರೆ.
ಅಧಿಕಾರಿಗಳ ತಂಡ ಕೇರಳದ ಅಲುವಾದಲ್ಲಿರುವ ದಿಲೀಪ್ ಮನೆಗೆ ಜ.13ರಂದು ಬೆಳಗ್ಗೆ 11.30ರ ಸುಮಾರಿಗೆ ದಾಳಿ ಮಾಡಿತು. ದಾಳಿ ವೇಳೆ ಮನೆಯಲ್ಲಿದ್ದ 1 ಕಂಪ್ಯೂಟರ್ ಹಾರ್ಡ್ ಡಿಸ್ಕ್ ಮತ್ತು ಮೊಬೈಲ್ ಫೋನ್ ಅನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ನಟ ದಿಲೀಪ್ ಹಾಗೂ ಅವರ ಸಹೋದರನ ಮನೆಗಳು ಮತ್ತು ಅವರ ನಿರ್ಮಾಣ ಸಂಸ್ಥೆಯ ಕಚೇರಿ ಸೇರಿದಂತೆ ಮೂರು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲು ಅಧಿಕಾರಿಗಳ ಮೂರು ತಂಡಗಳನ್ನು ಕಳುಹಿಸಲಾಗಿತ್ತು. ಈ ಮೂರು ತಂಡಗಳೂ 8 ಗಂಟೆಗಳ ಕಾಲ ಶೋಧ ಕಾರ್ಯವನ್ನು ನಡೆಸಿದ್ದಾರೆ ಎಂದು ಅಪರಾಧ ವಿಭಾಗದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿತರಾಗಿರುವ ನಟ ದಿಲೀಪ್ ರೊಂದಿಗೆ ನಿಕಟ ಸಂಪರ್ಕದಲ್ಲಿರುವವರ ನಡುವಿನ ಆರ್ಥಿಕ ವ್ಯವಹಾರವನ್ನು ಪರಿಶೀಲನೆ ಮಾಡಲು ದಾಳಿಯ ವೇಳೆ ಬಿಲ್ಸ್ ಮತ್ತು ಕೆಲ ಮಹತ್ವದ ದಾಖಲೆಗಳನ್ನು ಸಹ ವಶಕ್ಕೆ ಪಡೆಯಲಾಗಿದೆ.
ಮೂಲಗಳ ಪ್ರಕಾರ, ನ್ಯಾಯಾಲಯದ ಆದೇಶ ಮತ್ತು ನಿರ್ದೇಶಕ ಬಾಲಚಂದ್ರ ಕುಮಾರ್ ಅವರು ಅಪರಾಧ ವಿಭಾಗಕ್ಕೆ ಹೇಳಿಕೆ ನೀಡಿರುವ ಆಧಾರದಲ್ಲಿ ಈ ದಾಳಿಯನ್ನು ನಡೆಸಲಾಗಿದೆ. ಕ್ರೈಂ ಬ್ರ್ಯಾಂಚ್‌ಗೆ ಹಾಜರಾದ ಬಳಿಕ ಪ್ರತಿಕ್ರಿಯಿಸಿರುವ ಬಾಲಚಂದ್ರ ಕುಮಾರ್, ತನಿಖಾಧಿಕಾರಿಗಳ ಮೇಲೆ ಹಲ್ಲೆಗೆ ಸಂಚು ರೂಪಿಸಿರುವ ಬಗ್ಗೆ ಹಲವು ಕಡೆ ಚರ್ಚೆ ನಡೆದಿದೆ ಎಂದು ಹೇಳಿಕೊಂಡಿದ್ದಾರೆ.
ನಟಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ದಿಲೀಪ್ ವಿರುದ್ಧ ಇತ್ತೀಚೆಗೆ ಮಾಧ್ಯಮಗಳ ಮೂಲಕ ಹಲವು ಸ್ಫೋಟಕ ಸಂಗತಿಗಳನ್ನು ಕುಮಾರ್ ಬಹಿರಂಗಪಡಿಸಿದ್ದರು. ಸಾಕ್ಷಿಗಳ ಮೇಲೆ ದಿಲೀಪ್ ಪ್ರಭಾವ ಬೀರಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಡಿಜಿಟಲ್ ಸಾಕ್ಷ್ಯಗಳಿವೆ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಟಿವಿ ವಾಹಿನಿಯೊಂದು ಬಿಡುಗಡೆ ಮಾಡಿದ್ದ ದಿಲೀಪ್ ಆಡಿಯೋ ಕ್ಲಿಪ್ ಆಧರಿಸಿ ತನಿಖಾಧಿಕಾರಿ ನೀಡಿರುವ ದೂರಿನನ್ವಯ ಅಪರಾಧ ವಿಭಾಗದ ಪೊಲೀಸರು ಹೊಸ ಪ್ರಕರಣ ದಾಖಲಿಸಿದ್ದಾರೆ. ಮಂಗಳವಾರ, ಹೊಸ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಜಂಟಿ ಮನವಿ ಸಲ್ಲಿಸಿದ ಬಳಿಕ ಜನವರಿ 14ರವರೆಗೆ ದಿಲೀಪ್, ಅವರ ಸಹೋದರ ಮತ್ತು ಸೋದರ ಮಾವನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಪೊಲೀಸರಿಗೆ ಸೂಚಿಸಿದೆ.