
ಪತಿಯನ್ನು ಸುತ್ತಿಗೆಯಿಂದ ಹೊಡೆದು ಕೊಲೆಗೈದ ಮಹಿಳೆಯನ್ನು ಬಂಧಿಸದೆ ಬಿಟ್ಟು ಕಳುಹಿಸಿದ ತಮಿಳುನಾಡು ಪೊಲೀಸರು
Saturday, January 29, 2022
ಚೆನ್ನೈ: ಆತ್ಮರಕ್ಷಣೆಗಾಗಿ ಪತಿಯನ್ನೇ ಕೊಲೆಗೈದಿರುವ ಮಹಿಳೆಯನ್ನು ತಮಿಳುನಾಡು ಪೊಲೀಸರು ಬಿಡುಗಡೆ ಮಾಡಿದ್ದಾರೆಂದು ಸುದ್ದಿಯೊಂದು ವರದಿಯಾಗಿದೆ.
41 ವರ್ಷದ ಮಹಿಳೆಯನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 100ರ ಅಡಿಯಲ್ಲಿ ಬಿಡುಗಡೆ ಮಾಡಲಾಗಿದೆ. ಯಾವುದೇ ವ್ಯಕ್ತಿಗೆ ಯಾವುದಾದರೂ ಬೆದರಿಕೆಯಿದ್ದಾಗ ಆತ್ಮರಕ್ಷಣೆ ಮಾಡಿಕೊಳ್ಳುವ ಹಕ್ಕನ್ನು ಈ ಸೆಕ್ಷನ್ ನೀಡುತ್ತದೆ.
ಮಹಿಳೆಯ ಪತಿ ಮದ್ಯವ್ಯಸನಿಯಾಗಿದ್ದು, ಇವರಿಗೆ 20 ವರ್ಷದ ಮಗಳಿದ್ದಾಳೆ. ಮದ್ಯವ್ಯಸನಿಯಾಗಿದ್ದ ಪತಿ ಪ್ರತಿನಿತ್ಯವೂ ಹಣ ಕೊಡುವಂತೆ ಮಹಿಳೆಯನ್ನು ಪೀಡಿಸುತ್ತಿದ್ದ. ಅಲ್ಲದೆ, ಹಲ್ಲೆ ಸಹ ಮಾಡುತ್ತಿದ್ದ. ಗಜ.27ರಂದು ರಾತ್ರಿ ಪಾನಮತ್ತನಾದ ಆತ ಮನೆಗೆ ಬಂದು, ತನ್ನ 20 ವರ್ಷದ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾನೆ.
ಅದನ್ನು ತಡೆಯಲು ಮಹಿಳೆ ಯತ್ನಿಸಿದಾಗ, ಆಕೆಯ ಮೇಲೆ ಪತಿ ಹಲ್ಲೆ ಮಾಡಿದ್ದಾನೆ. ಪಾನಮತ್ತನಾಗಿ ಮೃಗದಂತೆ ನಡೆದುಕೊಳ್ಳುತ್ತಿದ್ದ ಪತಿಯಿಂದ ಪುತ್ರಿಯನ್ನು ರಕ್ಷಿಸಲು ಮಹಿಳೆ ತನ್ನ ಪತಿಯ ತಲೆಗೆ ಸುತ್ತಿಗೆಯಿಂದ ಹೊಡೆದಿದ್ದಾಳೆ. ಸುತ್ತಿಗೆಯಿಂದ ಹೊಡೆದ ರಭಸಕ್ಕೆ ಪಾನಮತ್ತ ಪತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಆ ಬಳಿಕ ಆಕೆ ವಿಚಾರವನ್ನು ನೆರೆಹೊರೆಯವರಿಗೆ ಈ ವಿಚಾರವನ್ನು ತಿಳಿಸಿದ್ದಾರೆ. ಆ ಬಳಿಕ ಈ ಮಾಹಿತಿ ಪೊಲೀಸರಿಗೆ ತಿಳಿದಿದ್ದು, ಮಹಿಳೆ ಮತ್ತು ಆಕೆಯ ಪುತ್ರಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಆಗ ಆತ್ಮರಕ್ಷಣೆಗಾಗಿ ಈ ಕೊಲೆ ನಡೆದಿದೆ ಎಂದು ಗೊತ್ತಾದಾಗ ಮಹಿಳೆ ಮತ್ತು ಆಕೆಯ ಪುತ್ರಿಯನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ.
ಆರಂಭದಲ್ಲಿ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ದಾಖಲಾಗಿದ್ದ ಎಫ್ಐಆರ್ ಅನ್ನು ಬದಲಾಯಿಸಿ ಸೆಕ್ಷನ್ 100ರ ಅಡಿಯಲ್ಲಿ ಅವರನ್ನು ಬಿಟ್ಟು ಕಳುಹಿಸಿದ್ದಾರೆ. ಸದ್ಯ ಪೊಲೀಸರು ಮತ್ತೆ ಆಕೆಯನ್ನು ಬಂಧಿಸಿಲ್ಲ. ಈ ಸಂಬಂಧ ಸಂಪೂರ್ಣ ವಿವರಣೆಯನ್ನು ತಮಿಳುನಾಡು ಪೊಲೀಸರು ನ್ಯಾಯಾಲಯ ಮುಂದೆ ಹಾಜರುಪಡಿಸಲಿದ್ದಾರೆ.