
ಯುವತಿಯ ಹೆಸರಿನಲ್ಲಿ ನಕಲಿ ಇನ್ ಸ್ಟಾಗ್ರಾಂ ಖಾತೆ: ಮಾಡೆಲಿಂಗ್ ಹೆಸರಲ್ಲಿ ಫೋಟೋ ಪಡೆದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಿ ಅರೆಸ್ಟ್
Wednesday, January 12, 2022
ಬೆಂಗಳೂರು: ಇನ್‌ಸ್ಟಾಗ್ರಾಂನಲ್ಲಿ ಯುವತಿ ಹೆಸರಿನಲ್ಲಿ ನಕಲಿ ಖಾತೆ ತೆರೆದು ಮಾಡೆಲ್ ಮಾಡಿಸುವುದಾಗಿ ಹೇಳಿ ಯುವತಿಯರ ಅರೆಬೆತ್ತಲೆ ಫೋಟೋ ತೆಗೆದು ಬೆದರಿಕೆಯೊಡ್ಡಿ ಹಣಕ್ಕೆ ಬೇಡಿಕೆಯಿಡುತ್ತಿದ್ದ ಆರೋಪಿಯನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ.
ಹಲಸೂರು ನಿವಾಸಿ ಪ್ರಪಂಚನ್ (28) ಬಂಧಿತ ಆರೋಪಿ.
ಆರೋಪಿ ಪ್ರಪಂಚನ್ ಯುವತಿ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ನಕಲಿ ಖಾತೆ ತೆರೆದು ತಾನು ಮಾಡೆಲಿಂಗ್ ಮಾಡುತ್ತಿದ್ದು, ಮಾಡೆಲಿಂಗ್ ಕ್ಷೇತ್ರಕ್ಕೆ ಬರುವ ಆಸಕ್ತಿಯಿರುವವರು ತನ್ನನ್ನು ಸಂಪರ್ಕಿಸಬಹುದು ಎಂದು ಪೋಸ್ಟ್ ಹಾಕಿದ್ದ. ಇದನ್ನು ನಂಬಿದ ಕೆಲ ಯುವತಿಯರು ಆತನ ಇನ್‌ಸ್ಟಾಗ್ರಾಂ ಖಾತೆಗೆ ಭೇಟಿ ನೀಡಿ ಆರೋಪಿಗೆ ಸಂದೇಶ ಕಳುಹಿಸುತ್ತಿದ್ದರು. ಬಳಿಕ ಸಂದೇಶ ಕಳುಹಿಸುತ್ತಿದ್ದ ಯುವತಿಯರಿಗೆ ಆರೋಪಿ ತನ್ನ ಮೊಬೈಲ್ ನಂಬರ್ ಕಳಿಸುತ್ತಿದ್ದ. ಯುವತಿಯರು ಆತನನ್ನು ಸಂಪರ್ಕಿಸಿದ ತಕ್ಷಣ ಮಾಡೆಲಿಂಗ್‌ಗೆ ಅಗತ್ಯವಿರುವ ಅರೆಬೆತ್ತಲೆ ಫೋಟೋ ಕಳುಹಿಸುವಂತೆ ಹೇಳುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಯುವತಿಯರು ಕಳುಹಿಸುತ್ತಿದ್ದ ಅರೆಬೆತ್ತಲೆ ಫೋಟೋಗಳನ್ನು ಆರೋಪಿ ಅಶ್ಲೀಲ ಚಿತ್ರಗಳಿಗೆ ಮಾರ್ಫಿಂಗ್ ಮಾಡುತ್ತಿದ್ದ. ಇದನ್ನು ಅದೇ ಯುವತಿಯರ ವಾಟ್ಸ್‌ಆ್ಯಪ್‌ಗೆ ಕಳುಹಿಸಿ ಹಣಕ್ಕೆ ಬೇಡಿಕೆಯಿಡುತ್ತಿದ್ದ. ಹಣ ಕೊಡದಿದ್ದಲ್ಲಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸುತ್ತಿದ್ದ.
ಇದರಿಂದ ಆತಂಕಿತರಾದ ಕೆಲ ಯುವತಿಯರು ಆರೋಪಿ ಪ್ರಪಂಚನ್ ಹೇಳಿರುವ ಬ್ಯಾಂಕ್ ಖಾತೆಗೆ ಆನ್‌ಲೈನ್ ಮೂಲಕ ಹಣ ಟ್ರಾನ್ಸ್ ಫರ್ ಮಾಡಿದ್ದಾರೆ. ಮೊದಲು 10 ಸಾವಿರ ರೂ. ಕಳುಹಿಸುವಂತೆ ಹೇಳಿದ ಆರೋಪಿ ಬಳಿಕ ಹಂತ-ಹಂತವಾಗಿ 1 ಲಕ್ಷ ರೂ.ವರಗೆ ಹಣ ವಸೂಲು ಮಾಡುತ್ತಿದ್ದ. ಇದುವರೆಗೂ ಈತ 20ಕ್ಕೂ ಅಧಿಕ ಯುವತಿಯರಿಗೆ ಬೆದರಿಕೆಯೊಡ್ಡಿ ಹಣ ಪೀಕಿಸಿದ್ದ ಎಂದು ಪೊಲೀಸರ ತನಿಖೆಯಿಂದ ಬಯಲಾಗಿದೆ.
ಆರೋಪಿ ತಾನು ಮಾಡೆಲ್ ಎಂದು ಇನ್‌ಸ್ಟಾಗ್ರಾಂನಲ್ಲಿ ಯುವತಿಯ ಹೆಸರಿನಲ್ಲಿ ಫೇಕ್ ಇನ್‌ಸ್ಟಾಗ್ರಾಂ ಖಾತೆಯನ್ನು ತೆರೆದಿದ್ದ. ಇದು ಯುವತಿಯೇ ಇರಬಹುದೆಂದು ಭಾವಿಸಿ ಯುವತಿಯವರು ತಮ್ಮ ಅರೆಬೆತ್ತಲೆ ಫೋಟೊಗಳನ್ನು ಕಳುಹಿಸಿ ವಂಚನೆಗೊಳಗಾಗುತ್ತಿದ್ದರು. ಯುವತಿಯೊಬ್ಬಳು ವಂಚನೆಗೊಳಗಾದ ಬಗ್ಗೆ ನವೆಂಬರ್‌ನಲ್ಲಿ ಹಲಸೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಸೋಮವಾರ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಪ್ರಪಂಚನ್ ಇದೇ ರೀತಿ ಹಲವು ಯುವತಿಯರಿಗೆ ವಂಚಿಸಿರುವುದಾಗಿ ತನಿಖೆಯಿಂದ ಬಯಲಾಗಿದೆ. ಇದೀಗ ಪೊಲೀಸರು ಆರೋಪಿಯ ಮೊಬೈಲ್ ಅನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.