
ಪತಿ ನಡೆಸುತ್ತಿದ್ದ ಡಾಬಾಗೆ ಬೆಂಕಿ ಹಚ್ಚಲು ಸುಪಾರಿ ನೀಡಿದ ಪತ್ನಿ ಅಂದರ್
Saturday, January 15, 2022
ಬೆಂಗಳೂರು: ಪತಿಯ ಮೇಲಿನ ಕೋಪಕ್ಕೆ ಆತ ಪಾಲುದಾರಿಕೆಯಲ್ಲಿ ನಡೆಸುತ್ತಿದ್ದ ಡಾಬಾಗೆ ಬೆಂಕಿ ಹಚ್ಚಲು ರೌಡಿಗೆ ಸುಪಾರಿ ನೀಡಿದ್ದ ಪತ್ನಿಯನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಬಳಿಕ ತಲೆಮರೆಸಿಕೊಂಡಿದ್ದ ಯೂ ಟರ್ನ್ ಡಾಬಾ ಮಾಲಕ ಅರ್ಪಿತ್ ಎಂಬವರ ಪತ್ನಿ ಶೀತಲ್ ಬಂಧಿತ ಆರೋಪಿತೆ.
ಡಿಸೆಂಬರ್ 24ರಂದು ರಾತ್ರಿ ದುಷ್ಕರ್ಮಿಗಳ ತಂಡವೊಂದು ಬಂದು ಯೂಟರ್ನ್ ಡಾಬಾಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಇದನ್ನು ಪ್ರಶ್ನಿಸಿ, ವಿರೋಧಿಸಿದ ಡಾಬಾದ ಸಿಬ್ಬಂದಿ ಮನೋಜ್ ಎಂಬಾತನ ಮೇಲೂ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಆ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮನೋಜ್ ಮೃತಪಟ್ಟಿದ್ದ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸೋಲದೇವನಹಳ್ಳಿ ಪೊಲೀಸರು ರೌಡಿಶೀಟರ್ ಮನುಕುಮಾರ್ ಸೇರಿದಂತೆ ಆತನ ಸಹಚರರಾದ ಹೇಮಂತ್ ಮತ್ತು ಮಂಜುನಾಥ್ ಸೇರಿ ಮೂವರು ಆರೋಪಿಗಳನ್ನು ಬಂಧಿಸಿದ್ದರು.
ಕೆಲ ತಿಂಗಳ ಹಿಂದೆಯಷ್ಟೇ ಅರ್ಪಿತ್ ಹಾಗೂ ಶೀತಲ್ ಮದುವೆಯಾಗಿತ್ತು. ಪ್ರಾರಂಭದಲ್ಲಿ ಅನೋನ್ಯವಾಗಿದ್ದ ದಂಪತಿಯ ಮಧ್ಯೆ ಕಾಲಕ್ರಮೇಣ ಕೌಟುಂಬಿಕ ಕಾರಣಕ್ಕಾಗಿ ವೈಮನಸ್ಸು ಬೆಳೆದಿತ್ತು. ಪರಿಣಾಮ ಇಬ್ಬರ ನಡುವೆ ನಿತ್ಯ ಜಗಳವಾಗುತಿತ್ತು. ಈ ಹಿನ್ನೆಲೆಯಲ್ಲಿ ಅರ್ಪಿತ್ ಪತ್ನಿಯನ್ನು ತವರು ಮನೆಗೆ ಬಿಟ್ಟು ಬಂದಿದ್ದ. ಹಲವು ದಿನಗಳಾದರೂ ಪತ್ನಿಯನ್ನು ನೋಡಲು ಹೋಗದೆ ಡಾಬಾ ವ್ಯವಹಾರದಲ್ಲಿ ಮಗ್ನನಾಗಿದ್ದ.
ಇದರಿಂದ ಅಸಮಾಧಾನಗೊಂಡ ಶೀತಲ್ ಪತಿಗೆ ಬುದ್ಧಿ ಕಲಿಸಲು ತನ್ನ ಸ್ನೇಹಿತ ರೌಡಿಶೀಟರ್ ಮನುಕುಮಾರ್ಗೆ 20 ಸಾವಿರ ರೂ. ಸುಪಾರಿ ನೀಡಿ, ಡಾಬಾಗೆ ಬೆಂಕಿ ಹಚ್ಚಲು ಸೂಚಿಸಿದ್ದಾಳೆ. ಇದರಿಂದ ಅರ್ಪಿತ್ಗೆ ಬುದ್ಧಿ ಬರುತ್ತದೆ ಎಂದು ಆಕೆ ಪ್ಲಾನ್ ಮಾಡಿದ್ದಳು. ಪ್ಲಾನ್ನಂತೆ ಮನು ಕುಮಾರ್ ಸುಪಾರಿ ತೆಗೆದುಕೊಂಡಿದ್ದ. ಈತನ ಸಹಚರರಿಗೆ ಹಣ ಕೊಟ್ಟು ಬೆಂಕಿ ಹಚ್ಚುವ ಸಂಚು ರೂಪಿಸಿದ್ದ.