
ಹೊಸ ವರ್ಷದ ಪಾರ್ಟಿಗೆಂದು ಮೇಕೆಗಳನ್ನು ಕದ್ದು ಭರ್ಜರಿ ಬಾಡೂಟ ಮಾಡಿದ ಎಎಸ್ಐ ಅಮಾನತು!
Sunday, January 2, 2022
ಬಲಂಗೀರ್: 'ಬೇಲಿಯೇ ಎದ್ದು ಹೊಲವನ್ನು ಮೇಯ್ತು' ಎಂಬಂತೆ ಇಲ್ಲೊಬ್ಬ ಪೊಲೀಸ್ ಅಧಿಕಾರಿಯೇ ಹೊಸ ವರ್ಷದ ಪಾರ್ಟಿಗೆಂದು 2 ಮೇಕೆಗಳನ್ನು ಕದ್ದು ಭರ್ಜರಿ ಬಾಡೂಟ ಮಾಡಿ ತಿಂದು ತೇಗಿರುವ ಘಟನೆ ನಡೆದಿದೆ.
ಒಡಿಶಾದ ಬಲಂಗೀರ್ ಜಿಲ್ಲೆಯ ಸಿಂಧೆಕೆಲಾ ಪೊಲೀಸ್ ಠಾಣೆಯ ಎಎಸ್‌ಐ ಸುಮನ್ ಮಲ್ಲಿಕ್ ಮೇಕೆ ಕದ್ದ ಆರೋಪಿ ಎಂದು ಹೇಳಲಾಗುತ್ತಿದೆ.
ಹೊಸ ವರ್ಷಕ್ಕೂ ಮುನ್ನಾ ದಿನ ಸಿಂಧೆಕೆಲಾ ಗ್ರಾಮದಲ್ಲಿ 2 ಮೇಕೆಗಳು ಕಳವಾಗಿದ್ದವು. ಮೇಕೆಗಳನ್ನು ಹುಡುಕಿಕೊಂಡ ಹೊರಟ ಮಾಲಕನಿಗೆ ಎಎಸ್ಐ ಸುಮನ್ ಮಲ್ಲಿಕ್ ಬಳಿ ಮೇಕೆಗಳಿರುವುದು ತಿಳಿದು ಬಂದಿದೆ. ಅವುಗಳನ್ನು ವಾಪಸ್ ಕೊಡುವಂತೆ ಆತ ಕಣ್ಣೀರಿಟ್ಟು ಮನವಿ ಮಾಡಿದ್ದಾನೆ. ಆದರೆ ಇದಕ್ಕೆ ಕ್ಯಾರೆ ಎನ್ನದೆ ಎಎಸ್ಐ, ಕದ್ದ ಮೇಕೆಗಳನ್ನು ಕೊಂದು ನ್ಯೂ ಇಯರ್ ಪಾರ್ಟಿಗೆ ಬಾಡೂಟ ಮಾಡಿಸಿದ್ದಾನದ. ಇದೀಗ ಎಎಸ್ಐ ವಿರುದ್ಧ ಮೇಕೆ ಮಾಲಕ ಗುರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಆಗ ಪೊಲೀಸ್ ಸಿಬ್ಬಂದಿ ಮೇಕೆಯ ಮಾಲಕನನ್ನು ಪೊಲೀಸ್ ವಾಹನದಲ್ಲಿ ಬೇರೆಡೆಗೆ ಕರೆದೊಯ್ದಿದ್ದಾರೆ. ಇದರಿಂದ ಕಂಗಾಲಾದ ಕುಟುಂಬಸ್ಥರು ಗ್ರಾಮಸ್ಥರೊಂದಿಗೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಧರಣಿ ನಡೆಸಿದ್ದಾರೆ. ಮೇಕೆ ಮಾಲಕನನ್ನು ಬಿಡುವಂತೆ ಹಾಗೂ 2 ಮೇಕೆಗಳ ಹಣ ಕೊಡುವಂತೆ ಆಗ್ರಹಿಸಿದ್ದಾರೆ.
ಇದನ್ನು ಗಂಭೀರವಾಗಿ ಪರಿಗಣಿಸಿದ ಬಲಂಗೀರ್ ಎಸ್ಪಿ ನಿತಿನ್ ಕುಸಲ್ಕರ್, ಹೊಸ ವರ್ಷದ ದಿನವೇ ಎಎಸ್‌ಐ ಸುಮನ್ ಮಲ್ಲಿಕ್ ನನ್ನು ಕೆಲಸದಿಂದ ಅಮಾನತು ಮಾಡಿ ಆದೇಶಿಸಿದ್ದಾರೆ. ತನ್ನ ಸಿಬ್ಬಂದಿ ಮೂಲಕ ಎಎಸ್ಐ ಮೇಕೆಗಳನ್ನು ಕಳವು ಮಾಡಿಸಿದ್ದನೆಂದು ಪ್ರಾಥಮಿಕ ವರದಿಯಲ್ಲಿ ಗೊತ್ತಾಗಿದೆ.