
ಡ್ರಗ್ಸ್ ಖರೀದಿಗೆ ಹಣದ ಕೊರತೆ: ವರದಕ್ಷಿಣೆ ತರವಂತೆ ಪತ್ನಿಗೆ ಪೀಡಿಸುತ್ತಿರುವ ಪತಿ!
Tuesday, January 18, 2022
ಬೆಂಗಳೂರು: ಡ್ರಗ್ಸ್ ಖರೀದಿಗೆ ವರದಕ್ಷಿಣೆ ಹಣ ತರಲಿಲ್ಲವೆಂದು ಏಕಾಂತದಲ್ಲಿದ್ದಾಗ ಸೆರೆಹಿಡಿದ ಅಶ್ಲೀಲ ವಿಡಿಯೋ ಹಾಗೂ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡುವುದಾಗಿ ಪತ್ನಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಪತಿಯ ವಿರುದ್ಧ ವೈಯ್ಯಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮಲ್ಲೇಶ್ವರದ ನಿವಾಸಿಯಾದ 24 ವರ್ಷದ ಯುವತಿ ನೀಡಿರುವ ದೂರಿನನ್ವಯ ಆಕೆಯ ಪತಿ 27 ವರ್ಷದ ಮೂಲತಃ ಚಿಕ್ಕಮಗಳೂರು ನಿವಾಸಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳೆದ ವರ್ಷ ಆರೋಪಿ ದೂರುದಾರೆ ಯುವತಿಯನ್ನು ವಿವಾಹವಾಗಿದ್ದ. ಇದಾದ ಕೆಲವೇ ದಿನಗಳಲ್ಲೇ ಪತಿ ಮದ್ಯಸೇವನೆ ಮಾಡಿ ಬಂದು ಪತ್ನಿಗೆ ಕಿರುಕುಳ ಕೊಡಲಾರಂಭಿಸಿದ್ದಾನೆ. ಅಷ್ಟಲ್ಲದೆ ಡ್ರಗ್ಸ್ ಸೇವನೆ ಹಾಗೂ ಇತರಮಹಿಳೆಯರೊಂದಿಗೆ ಆತ ಅಕ್ರಮ ಸಂಬಂಧ ಹೊಂದಿರುವುದರ ಸಂಗತಿ ಪತ್ನಿಯ ಗಮನಕ್ಕೆ ಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ, ತನಗೂ ಡ್ರಗ್ಸ್ ಸೇವನೆ ಮಾಡುವಂತೆ ಒತ್ತಾಯ ಮಾಡುತ್ತಿದ್ದ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಈ ಮಧ್ಯೆ ಆತ ಡ್ರಗ್ಸ್ ಖರೀದಿಗೆ ಹಣದ ಕೊರತೆಯಾದಾಗ ವರದಕ್ಷಿಣೆ ತರುವಂತೆ ಪತ್ನಿಗೆ ಹಲ್ಲೆ ನಡೆಸಿ ಬೆದರಿಸಿದ್ದಾನೆ. ಅಲ್ಲದೆ ಏಕಾಂತದಲ್ಲಿದ್ದ ಸಂದರ್ಭ ಪತ್ನಿಯ ಗಮನಕ್ಕೆ ಬಾರದಂತೆ ಇಬ್ಬರ ನಡುವಿನ ಅಶ್ಲೀಲ ವಿಡಿಯೋ ಹಾಗೂ ಫೋಟೋಗಳನ್ನು ಆರೋಪಿ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಹಣ ನೀಡದಿದ್ದಲ್ಲಿ ಅದನ್ನು ವೈರಲ್ ಮಾಡುವುದಾಗಿ ಆತ ಬೆದರಿಕೆ ಒಡ್ಡಿದ್ದಾನೆ ಎನ್ನಲಾಗಿದೆ.
ಇದರಿಂದ ಆಕೆ ಇದೀಗ ಠಾಣೆ ಮೆಟ್ಟಿಲೇರಿದ್ದಾಳೆ. ಇದೀಗ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.