
ಮಂಗಳೂರು: ಸಮವಸ್ತ್ರದಲ್ಲಿದ್ದ ಪೊಲೀಸರಿಬ್ಬರ ಮೇಲೆ ಹಲ್ಲೆ, ನಿಂದನೆ; ಇಬ್ಬರು ಅರೆಸ್ಟ್
Saturday, January 22, 2022
ಮಂಗಳೂರು: ಕರ್ತವ್ಯದ ಬಳಿಕ ಮನೆಗೆ ಹೋಗುತ್ತಿದ್ದ ಪೊಲೀಸರಿಬ್ಬರ ಮೇಲೆ ಸಮವಸ್ತ್ರದಲ್ಲಿದ್ದಾಗಲೇ ಹಲ್ಲೆ ನಡೆಸಿರುವ ಆರೋಪದ ಮೇಲೆ ಇಬ್ಬರು ದುಷ್ಕರ್ಮಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಡ್ಯಾನಿ ಪೌಲ್ (39) ಹಾಗೂ ಮ್ಯಾಕ್ಷಿಂ ಜೋಸೆಫ್(54) ಬಂಧಿತ ಆರೋಪಿಗಳು.
ನಗರದ ಕದ್ರಿ ಠಾಣೆಯ ಪೊಲೀಸ್ ಕಾನ್ ಸ್ಟೇಬಲ್ ಗಳಾದ ಶಿವಾನಂದ ಡಿ.ಟಿ. ಹಾಗೂ ಬೀರೇಂದ್ರ ಜ.18ರಂದು ಕರ್ತವ್ಯ ಮುಗಿಸಿ ವಾಮಂಜೂರಿನಲ್ಲಿರುವ ತಮ್ಮ ವಸತಿಗೃಹಕ್ಕೆ ತೆರಳುತ್ತಿದ್ದರು. ಠಾಣೆಯಿಂದ ಯೆಯ್ಯಾಡಿ ಜಂಕ್ಷನ್ ತಲುಪುತ್ತಿದ್ದಂತೆ ಕಾರಿನಲ್ಲಿದ್ದ ಇಬ್ಬರು ಪೊಲೀಸರನ್ನು ತಡೆದಿದ್ದಾರೆ.
ಬಳಿಕ ಪೊಲೀಸ್ ಸಿಬ್ಬಂದಿಯ ಬೈಕ್ ಕೀ ಕಿತ್ತುಕೊಂಡು ಸಮವಸ್ತ್ರವನ್ನು ಎಳೆದಾಡಿದ್ದಾರೆ. ಅಲ್ಲದೆ 'ನೀವು ನಕಲಿ ಪೊಲೀಸರು, ರೋಲ್ ಕಾಲ್ ಮಾಡುತ್ತಿದ್ದೀರಿ' ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಳಿಕ ಸಮವಸ್ತ್ರದ ಬಟನ್ ಕಿತ್ತು ಹಾಕಿ ಇಬ್ಬರಿಗೂ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಪೊಲೀಸ್ ಇಲಾಖೆಯನ್ನು ನಿಂದಿಸಿ ಅವರ ಸ್ಲೋ ಚಾಟನ್ನು ಕಿತ್ತು ಹಾಕಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.