
ಅನ್ಯ ಜಾತಿಯ ಯುವತಿಯೊಂದಿಗೆ ಓಡಿ ಹೋದ ಪುತ್ರ: ತಾಯಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿಸಿದ ಸಂಬಂಧಿಕರು
Thursday, January 27, 2022
ಚೆನ್ನೈ: ತಮ್ಮ ಗ್ರಾಮದ ಅನ್ಯ ಜಾತಿಯ ಯುವತಿಯೊಂದಿಗೆ ಪುತ್ರ ಓಡಿ ಹೋಗಿರುವುದ್ದಕ್ಕೆ ಗುಂಪೊಂದು ಆತನ 45 ವರ್ಷದ ತಾಯಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿರುವ ಅಮಾನವೀಯ ಘಟನೆ ತಮಿಳುನಾಡಿನ ವಿರುಧಾನಗರ ಜಿಲ್ಲೆಯ ಕೆ.ವಗೈಕುಲಮ್ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಮೀನಾಕ್ಷಿ ಎಂಬಾಕೆ ಸಂತ್ರಸ್ತೆಯೆಂದು ಗುರುತಿಸಲಾಗಿದೆ. ಥಳಿತಕ್ಕೆ ಒಳಗಾಗಿರುವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು ಆಕೆಯನ್ನು ಅರುಪ್ಪುಕೊಟೈ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂತ್ರಸ್ತ ಮಹಿಳೆ ಮೀನಾಕ್ಷಿ ನೀಡಿರುವ ದೂರಿನನ್ವಯ ಪರಲಚಿ ಠಾಣಾ ಪೊಲೀಸರು ಯುವತಿಯ ತಾಯಿ ಸೇರಿದಂತೆ 14 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪೊಲೀಸರ ಪ್ರಕಾರ ಜ.22ರಂದು ಸಂತ್ರಸ್ತೆಯ ಪುತ್ರ ಬೇರೆ ಜಾತಿಯ ಯುವತಿಯೊಂದಿಗೆ ಓಡಿ ಹೋಗಿದ್ದಾನೆ. ಬಳಿಕ ಇಬ್ಬರೂ ವಿವಾಹವಾಗಿ ರಕ್ಷಣೆ ನೀಡುವಂತೆ ಕೋರಿ ಅರುಪ್ಪುಕೊಟೈ ಮಹಿಳಾ ಪೊಲೀಸ್ ಠಾಣೆಯ ಮೊರೆ ಹೋಗಿದ್ದಾರೆ. ಇದಾದ ಮೂರು ದಿನಗಳ ಬಳಿಕ ಅಂದರೆ ಜ.25ರಂದು ಯುವತಿಯ ಸಂಬಂಧಿಕರು ಮೀನಾಕ್ಷಿ ಮನೆಗೆ ಬಂದಿದ್ದಾರೆ. ಬಳಿಕ ಆಕೆಯನ್ನು ಮನೆಯಿಂದ ಹೊರಗೆ ಎಳೆದುಕೊಂಡು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿಸಿ, ಕೆಟ್ಟದಾಗಿ ನಿಂದಿಸಿದ್ದಾರೆ.
ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಮುಂದಾಗಿದ್ದಾರೆ.