
ಮಸಾಜ್ ಪಾರ್ಲರ್ ಸಹದ್ಯೋಗಿ ಮಹಿಳೆಗೆ ಹಲ್ಲೆಗೈದ ಯುವಕ: ಸಿಸಿ ಕ್ಯಾಮರಾದಲ್ಲಿ ದೃಶ್ಯ ಸರೆ
Friday, January 28, 2022
ಕೊಚ್ಚಿ: ಹಲ್ಲೆ ಮಾಡಿರೋದಲ್ಲದೆ, ಲೈಂಗಿಕ ದೌರ್ಜನ್ಯ ಯತ್ನದ ಆರೋಪ ಮಾಡಿ ಪುರುಷ ಸಹೋದ್ಯೋಗಿಯ ವಿರುದ್ಧ ಆಯುರ್ವೇದ ಮಸಾಜ್ ಕೇಂದ್ರದ ಮಹಿಳಾ ಉದ್ಯೋಗಿಯೋರ್ವರು ದೂರು ದಾಖಲಿಸಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ.
ಕಣ್ಣೂರಿನ ಪಯ್ಯವುರ್ ನಿವಾಸಿ ಅಜಿತ್ ನಾರಾಯಣನ್ ಆರೋಪಿಯೆಂದು ಗುರುತಿಸಲಾಗಿದೆ.
ಈತ ಮಹಿಳಾ ಸಿಬ್ಬಂದಿಗೆ ಹಲ್ಲೆ ನಡೆಸಿರುವ ಸಂಬಂಧಿಸಿದ ಸಿಸಿಟಿವಿ ಕ್ಯಾಮರಾ ದೃಶ್ಯ ಲಭ್ಯವಾಗಿದೆ. ಆರೋಪಿ ಸಂತ್ರಸ್ತೆಯ ಮೇಲೆ ಹಲ್ಲೆ ನಡಿಸಿರುವ ದೃಶ್ಯ ದಾಖಲಾಗಿದೆ. ಸಾಕಷ್ಟು ಸಾಕ್ಷ್ಯಾಧಾರ ಲಭ್ಯವಿದ್ದರೂ ಈವರೆಗೂ ಆರೋಪಿಯ ಬಂಧನವಾಗಿಲ್ಲ ಎಂದು ಸಂತ್ರಸ್ತೆ ಪೊಲೀಸರ ವಿರುದ್ಧ ಆರೋಪ ಮಾಡಿದ್ದಾರೆ.
ಕಳೆದ ಸೋಮವಾರ ಮಸಾಜ್ ಕೇಂದ್ರಕ್ಕೆ ಬಂದಿದ್ದ ಗ್ರಾಹಕರೋರ್ವರು ಮಸಾಜ್ ಕೇಂದ್ರದಲ್ಲಿ ನೀಡಿರುವ ಸೇವೆಯ ವಿರುದ್ಧ ದೂರಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿ ಅಜಿತ್ ನಾರಾಯಣನ್, ಸಂತ್ರಸ್ತೆಯೊಂದಿಗೆ ವಾಗ್ವಾದಕ್ಕಿಳಿದಿದ್ದಾನೆ. ಈ ವೇಳೆ ಮಹಿಳೆಗೆ ಆತ ಥಳಿಸಿದ್ದಾನೆ. ಅಲ್ಲದೆ, ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಯನ್ನು ಸಹ ಜತೆಗೆ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಎರ್ನಾಕುಲಂ ಉತ್ತರ ಪೊಲೀಸ್ ಠಾಣೆಯ ಅಧಿಕಾರಿ, ಆರೋಪಿ ಅಜಿತ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ, ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.