
ಸುಳ್ಯ: ಪುತ್ರನ ಎದೆಗೇ ಚೂರಿಯಿಂದ ಇರಿದ ತಂದೆ; ಗಾಯಾಳು ಆಸ್ಪತ್ರೆಗೆ ದಾಖಲು
Tuesday, January 25, 2022
ಸುಳ್ಯ(ದಕ್ಷಿಣ ಕನ್ನಡ) : ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಗುಂಡ್ಯ ಎಂಬಲ್ಲಿ ತಂದೆ ಹಾಗೂ ಪುತ್ರನ ನಡುವೆ ವಾಗ್ವಾದ ನಡೆದು ಮಗನ ಎದೆಗೇ ತಂದೆಯೇ ಚೂರಿಯಿಂದ ಇರಿದ ಘಟನೆಯೊಂದು ನಡೆದಿದೆ.
ಜಯಪ್ರಕಾಶ್ ಎಂಬಾತ ಹಲ್ಲೆಗೊಳಗಾದ ಯುವಕ. ಇದೀಗ ಈತನನ್ನು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಗುಂಡ್ಯ ನಿವಾಸಿ ಐತಪ್ಪ ನಾಯ್ಕ್ ಹಾಗೂ ಆತನ ಪುತ್ರ ಜಯಪ್ರಕಾಶ್ ನಡುವೆ ಮಾತಿನ ಚಕಮಕಿ ನಡೆದು ಹೊಡೆದಾಟವೇ ನಡೆದಿದೆ. ಈ ಸಂದರ್ಭ ಜಯಪ್ರಕಾಶ್‌ನ ಎದೆಗೆ ತಂದೆ ಐತ್ತಪ್ಪ ನಾಯ್ಕ್ ಚಾಕುವಿನಿಂದ ಇರಿದಿದ್ದಾರೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರು ವಿಪರೀತವಾಗಿ ರಕ್ತಸ್ರಾವಕ್ಕೊಳಗಾಗಿದ್ದಾರೆ.
ತಕ್ಷಣ ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದರು. ಆದರೆ ರಕ್ತಸ್ರಾವ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗಲು ತಿಳಿಸಿದ್ದಾರೆ. ಸದ್ಯ ಅವರನ್ನು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ವಿಪರೀತ ಮದ್ಯ ಸೇವನೆಯ ಚಟ ಹೊಂದಿದ್ದರು ಎನ್ನಲಾಗಿದೆ.