
ಬಾಲಕಿಯ ಅತ್ಯಾಚಾರಗೈದ ಆರೋಪಿ ಉಪನ್ಯಾಸಕನ ಜಾಮೀನು ಅರ್ಜಿ ಹೈಕೋರ್ಟ್ ರದ್ದು
Saturday, January 22, 2022
ಬೆಂಗಳೂರು: ಬಾಲಕಿ ಮೇಲೆ ಅತ್ಯಾಚಾರಗೈದಿರುವ ಆರೋಪಕ್ಕೆ ಒಳಗಾಗಿರುವ ಉಪನ್ಯಾಸಕನ ಜಾಮೀನು ಅರ್ಜಿಯನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.
ಸಂತ್ರಸ್ತ ಬಾಲಕಿಯ ಪೋಷಕರು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ ಸಂದೇಶ್ ಅವರಿದ್ದ ಪೀಠವು ಆರೋಪಿ ಉಪನ್ಯಾಸಕ ಗುರುರಾಜ್ಗೆ ದ.ಕ. ಜಿಲ್ಲಾ ನ್ಯಾಯಾಲಯ ನೀಡಿರುವ ಜಾಮೀನನ್ನು ರದ್ದುಗೊಳಿಸಿ ಆದೇಶಿಸಿದೆ. 2018ರಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಬಾಲಕಿಯನ್ನು ಅತ್ಯಾಚಾರಗೈದು ಆಕೆಯ ನಗ್ನ ಫೋಟೊವನ್ನು ಸೆರೆ ಹಿಡಿದಿದ್ದ ಆರೋಪ ಮಾಡಿ ಸಂತ್ರಸ್ತ ಬಾಲಕಿಯ ಪೋಷಕರು 2021ರಲ್ಲಿ ದೂರು ದಾಖಲಿಸಿದ್ದರು. ಎಫ್ಐಆರ್ ದಾಖಲಿಸಿದ್ದ ಪೊಲೀಸರು ಆರೋಪಿ ಉಪನ್ಯಾಸಕನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಆರೋಪಿ ಬಂಧನಕ್ಕೊಳಗಾದ ಎರಡೇ ದಿನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿ ಉಪನ್ಯಾಸಕ ಗುರುರಾಜ್ಗೆ ಜಾಮೀನು ನೀಡಿ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಸಂತ್ರಸ್ತ ಬಾಲಕಿಯ ಪೋಷಕರು ಆರೋಪಿಗೆ ನೀಡಿರುವ ಜಾಮೀನು ರದ್ದುಪಡಿಸುವಂತೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಆರೋಪಿಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಜಾಮೀನು ರದ್ದುಗೊಳಿಸಿ ಆದೇಶಿಸಿದೆ.