
ಸುಬ್ರಹ್ಮಣ್ಯ: ವಿದ್ಯಾರ್ಥಿನಿಯನ್ನು ಅತ್ಯಾಚಾರಗೈದ ಕಾಮುಕ ಶಿಕ್ಷಕ: ಆರೋಪಿ ಜಾಮೀನು ವಜಾಗೊಳಿಸಿದ ಹೈಕೋರ್ಟ್!
Saturday, January 15, 2022
ಸುಬ್ರಹ್ಮಣ್ಯ: ಇಲ್ಲಿನ ಪ.ಪೂ. ಕಾಲೇಜಿನ ಹೈಸ್ಕೂಲ್ ವಿಭಾಗದ ವಿದ್ಯಾರ್ಥಿನಿ ಮೇಲೆ ಶಿಕ್ಷಕನೋರ್ವನು ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದರು. ಆದರೆ ಕೆಲವೇ ದಿನಗಳಲ್ಲಿ ಜಾಮೀನು ಪಡೆದು ಬಿಡುಗಡೆ ಗೊಂಡಿದ್ದ.
ಆ ಬಳಿಕ ಆರೋಪಿ ಶಿಕ್ಷಕ ಗುರುರಾಜ್ ಮೇಲಿನ ಜಾಮೀನು ಅರ್ಜಿಯನ್ನು ವಜಾ ಮಾಡುವಂತೆ ಸಲ್ಲಿಸಿರುವ ಮೇಲ್ಮನವಿಯನ್ನು ಪುರಸ್ಕರಿಸಿರುವ ಹೈಕೋರ್ಟ್ ಆರೋಪಿ ಗುರುರಾಜ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಇದು ತಮ್ಮ ನ್ಯಾಯಪರ ಹೋರಾಟಕ್ಕೆ ದೊರಕಿರುವ ಗೆಲುವು ಎಂದು ಸುಬ್ರಹ್ಮಣ್ಯ ಪಿಯು ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್‌ಎಸ್ ಹೇಳಿದ್ದಾರೆ.
ಹಿರಿಯ ವಿದ್ಯಾರ್ಥಿ ಸಂಘ, ಎಬಿವಿಪಿ ಸಹಿತ ವಿವಿಧ ಸಂಘ ಸಂಸ್ಥೆಗಳು ಈ ಘಟನೆಯನ್ನು ಖಂಡಿಸಿದ್ದಲ್ಲದೆ, ಕೆಳ ನ್ಯಾಯಾಲಯವು ನೀಡಿರುವ ಜಾಮೀನು ಅರ್ಜಿಯನ್ನು ವಜಾಗೊಳಿಸುವಂತೆ ಆಗ್ರಹಿಸಿದ್ದರು. ಜತೆಗೆ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.
ಬಂಧನಕ್ಕೊಳಗಾಗಿ ಆರು ತಿಂಗಳ ಬಳಿಕ ಆರೋಪಿಗೆ ಕೆಳ ನ್ಯಾಯಾಲಯ ನೀಡಿರುವ ಜಾಮೀನನ್ನು ಶುಕ್ರವಾರ ಹೈಕೋರ್ಟ್ ವಜಾಗೊಳಿಸಿದೆ. ಇದು ಸತ್ಯಕ್ಕೆ ಸಿಕ್ಕ ಜಯ. ಮುಂದಕ್ಕೆ ಇಂತಹ ನೀಚ ಕೃತ್ಯ ಎಸಗುವ ಆರೋಪಿಗಳಿಗೆ ಕಠಿಣ ಶಿಕ್ಷೆ ದೊರಕಬೇಕೆಂಬುದೇ ನಮ್ಮ ಆಗ್ರಹ. ಪುತ್ತೂರಿನ ನ್ಯಾಯವಾದಿ ನರಸಿಂಹಪ್ರಸಾದ್, ಸಚಿನ್ ಬೆಂಗಳೂರು ಅವರು ವಾದ ಮಾಡಿ ಈ ಜಯವನ್ನು ಗಳಿಸಿದ್ದಾರೆ. ಅವರಿಗೆ ಎಲ್ಲರ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ. ಆರೋಪಿ ಮತ್ತೆ ಶಿಕ್ಷಣ ಸಂಸ್ಥೆಗೆ ಸೇರಿಕೊಳ್ಳಲು ಪ್ರಯತ್ನಿಸುತ್ತಿರುವುದು ಗಮನಕ್ಕೆ ಬಂದಿದೆ. ಆದರೆ ಆತನಿಗೆ ಎಲ್ಲಿಯೂ ಅವಕಾಶ ನೀಡಬಾರದೆಂದು ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿದರು.