
ಐದು ವರ್ಷಗಳ ಕರಾಳ ಘಟನೆಯ ಬಗ್ಗೆ ಮೌನ ಮುರಿದ ನಟಿ ಭಾವನಾ ಮೆನನ್: ಸಾಮಾಜಿಕ ಜಾಲತಾಣದಲ್ಲಿ ನಟಿ ಬರೆದಿದ್ದೇನು?
Wednesday, January 12, 2022
ಚೆನ್ನೈ: ನಟಿ ಭಾವನಾ ಮೆನನ್ ಜೀವನದಲ್ಲಿ ಆ ಒಂದು ಕರಾಳ ಘಟನೆ ನಡೆದು ಸುಮಾರು ಐದು ವರ್ಷವೇ ಕಳೆದಿದೆ. ಆದರೆ ಇದುವರೆಗೂ ಸಂತ್ರಸ್ತೆಯ ಹೆಸರನ್ನು ಯಾರೂ ಎಲ್ಲಿಯೂ ಉಲ್ಲೇಖಿಸಿರಲಿಲ್ಲ. ಅಲ್ಲದೆ, ಯಾವುದೇ ವರದಿಯಲ್ಲೂ ಅವರ ಹೆಸರನ್ನು ಪ್ರಕಟಿಸಿರಲಿಲ್ಲ. ಇದಕ್ಕೆ ಕಾರಣ ಕಾನೂನು ಕ್ರಮದ ಎಚ್ಚರಿಕೆ ಅಷ್ಟೇ. ಆದರೀಗ ಸ್ವತಃ ಭಾವನಾ ಅವರೇ ಅಂದು ನಡೆದಿರುವ ಘಟನೆಯ ಬಗ್ಗೆ ಮೌನ ಮುರಿದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮಗನಿಸಿದ್ದನ್ನು ಭಾವನಾ ಬರೆದುಕೊಂಡಿದ್ದಾರೆ.
ಅಂದ ಹಾಗೆ ಭಾವನಾ ಮೆನನ್ ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಭಾಷೆಯಲ್ಲಿ ಸಾಕಷ್ಟು ಸಿನಿಮಾ ಮಾಡಿರುವ ಬಹುಭಾಷಾ ನಟಿ. ಐದು ವರ್ಷಗಳ ಹಿಂದೆ ಇವರು ಶೂಟಿಂಗ್ ಮುಗಿಸಿ ಕಾರಿನಲ್ಲಿ ಮರಳುವಾಗ ಕಿಡಿಗೇಡಿಗಳ ಗುಂಪೊಂದು ಭಾವನಾರನ್ನು ಅಪಹರಿಸಿ, ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿತ್ತು ಎಂದು ಹೇಳಲಾಗಿದೆ. ಇದೇ ಪ್ರಕರಣದಲ್ಲಿ ಮಲಯಾಳಂನ ಪ್ರಖ್ಯಾತ ನಟ ದಿಲೀಪ್ರನ್ನು ಬಂಧಿಸಲಾಗಿತ್ತು. ಸದ್ಯ ಅವರು ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಪ್ರಕರಣ ಮಾತ್ರ ನ್ಯಾಯಾಲಯದಲ್ಲಿದೆ.
ಇದೀಗ ಅಂದಿನ ಘಟನೆಯ ಬಗ್ಗೆ ಮಾತನಾಡಿರುವ ಭಾವನಾ, 'ಓರ್ವ ಸಂತ್ರಸ್ತೆಯಾಗಿ ಬದುಕಿ ಉಳಿಯುವುದು ಸುಲಭದ ಮಾತೇನಲ್ಲ. ಅನೇಕ ವರ್ಷಗಳವರೆಗೆ ನನ್ನ ಹೆಸರು ಹಾಗೂ ಗುರುತನ್ನು ನನ್ನ ಮೇಲೆ ಮಾಡಿರುವ ಹಲ್ಲೆಯ ಭಾರದಲ್ಲಿ ನಿಗ್ರಹಿಸಲಾಯಿತು. ನಾನಾಗಿ ಯಾವುದೇ ಅಪರಾಧವನ್ನು ಮಾಡದಿದ್ದರೂ ನನ್ನ ಧ್ವನಿ ಮೌನವಾಯಿತು. ಅಲ್ಲದೆ ನನ್ನನ್ನು ಅವಮಾನಿಸಲು ಸಾಕಷ್ಟು ಬಾರಿ ಯತ್ನವೂ ನಡೆಯಿತು. ನನ್ನ ಧ್ವನಿಯನ್ನು ಮಟ್ಟಹಾಕಲು ಹಾಗೂ ನನ್ನನ್ನು ಒಂಟಿಯಾಗಿ ಮಾಡಲು ಸಾಕಷ್ಟು ಪ್ರಯತ್ನಿಸಿದರು. ಈಗ ಬಹಳಷ್ಟು ಮಂದಿ ನನಗಾಗಿ ಹೋರಾಡುತ್ತಿದ್ದಾರೆ. ನನಗೆ ಧ್ವನಿಯಾಗಿದ್ದಾರೆ. ಅವರೆಲ್ಲರ ಬೆಂಬಲದಿಂದ ನಾನಿಂದು ಸಂತೋಷವಾಗಿದ್ದೇನೆ' ಎಂದು ಭಾವನಾ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
'ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಅದೇ ರೀತಿ ನ್ಯಾಯವು ಮೇಲುಗೈ ಸಾಧಿಸುವುದನ್ನು ನೋಡಲು ಹಾಗೂ ಯಾರೂ ಮತ್ತೆ ಅಂತಹ ಅಗ್ನಿಪರೀಕ್ಷೆಗೆ ಒಳಗಾಗಬಾರದೆಂದು ಖಚಿತಪಡಿಸಿಕೊಳ್ಳಲು, ನಾನು ಈ ಪ್ರಯಾಣವನ್ನು ಮುಂದುವರಿಸುತ್ತೇನೆ. ನನ್ನ ಜತೆ ನಿಂತು ಧ್ವನಿ ಎತ್ತಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು' ಎಂದು ಭಾವನಾ ಬರೆದು ಕೊಂಡಿದ್ದಾರೆ.
ದೌರ್ಜನ್ಯ ನಡೆದ ಕೆಲವು ವರ್ಷಗಳ ಬಳಿಕ ಭಾವನಾ ಮೆನನ್ ಅವರು ನವೀನ್ ಎಂಬುವರನ್ನು ವಿವಾಹವಾಗಿ ಸಂಸಾರ ನಡೆಸುತ್ತಿದ್ದಾರೆ. ಕೆಲವು ಪ್ರಭಾವಿ ವ್ಯಕ್ತಿಗಳಿಂದ ಮಲಯಾಳಂ ಸಿನಿಮಾದಲ್ಲಿ ಅವಕಾಶಗಳು ದೊರೆಯದ ಕಾರಣ ಭಾವನಾ ಕನ್ನಡ ಚಲನಚಿತ್ರಗಳಲ್ಲಿ ನಿರತರಾಗಿದ್ದಾರೆ.